Bahadur Shah Zafar, Red Fort 
ಸುದ್ದಿಗಳು

"ಕೆಂಪುಕೋಟೆಯಷ್ಟೇ ಏಕೆ ಫತೇಪುರ್ ಸಿಕ್ರಿ ಬೇಡವೇ?" ಮೊಘಲ್ ವಂಶಸ್ಥೆಗೆ ಸುಪ್ರೀಂ ತಪರಾಕಿ, ಅರ್ಜಿ ತಿರಸ್ಕಾರ

ಸುಲ್ತಾನಾ ಬೇಗಂ ಸಲ್ಲಿಸಿದ ಅರ್ಜಿ ಸಂಪೂರ್ಣ ತಪ್ಪು ಗ್ರಹಿಕೆಯಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ಹೇಳಿದೆ.

Bar & Bench

ತಾನು ಮೊಘಲ್ ಸಾಮ್ರಾಜ್ಯದ ಕೊನೆಯ ಮೊಘಲ್ ಚಕ್ರವರ್ತಿಎರಡನೇ ಬಹದ್ದೂರ್ ಶಾ ಜಫರ್ ಅವರ ಉತ್ತರಾಧಿಕಾರಿಯಾಗಿದ್ದು ಈ ಕಾರಣಕ್ಕೆ ದೆಹಲಿಯ ಕೆಂಪುಕೋಟೆಯನ್ನು ತಮ್ಮ ಸ್ವಾಧೀನಕ್ಕೆ ಒಪ್ಪಿಸಬೇಕು ಎಂದು ಕೋರಿ ಸುಲ್ತಾನಾ ಬೇಗಂ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ಸುಲ್ತಾನಾ ಬೇಗಂ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಸುಲ್ತಾನಾ ಬೇಗಂ ಸಲ್ಲಿಸಿದ ಅರ್ಜಿ  ಸಂಪೂರ್ಣ  ತಪ್ಪು ಗ್ರಹಿಕೆಯಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ಹೇಳಿದೆ.

"ಕೆಂಪು ಕೋಟೆಯಷ್ಟೇ ಏಕೆ? ಫತೇಪುರ್ ಸಿಕ್ರಿ ಬೇಡವೇ? ಅದನ್ನೇಕೆ  ಬಿಟ್ಟಿದ್ದೀರಿ. ರಿಟ್ ಸಂಪೂರ್ಣವಾಗಿ ತಪ್ಪು ಕಲ್ಪನೆಯಿಂದ ಕೂಡಿದೆ. ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಈ ಹಿಂದೆ ಅರ್ಜಿ ಆಲಿಸಿದ್ದ ದೆಹಲಿ ಹೈಕೋರ್ಟ್‌ ಅರ್ಹತೆಯ ಬದಲಿಗೆ ವಿಳಂಬದ ಕಾರಣಕ್ಕೆ ಅರ್ಜಿಯನ್ನು ವಜಾಗೊಳಿಸಿತ್ತು ಅಷ್ಟೇ ಆ ವಿನಾಯಿತಿಯನ್ನು ಇಲ್ಲಿಯೂ ನೀಡಬೇಕು ಎಂದು ಸುಲ್ತಾನಾ ಬೇಗಂ ಪರ ವಕೀಲರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಅರ್ಹತೆಯ ಆಧಾರದಲ್ಲಿಯೇ ಅದು ಅರ್ಜಿಯನ್ನು ವಜಾಗೊಳಿಸಿತು.

ಕೆಂಪು ಕೋಟೆಯಷ್ಟೇ ಏಕೆ? ಫತೇಪುರ್ ಸಿಕ್ರಿ ಬೇಡವೇ?
ಸುಪ್ರೀಂ ಕೋರ್ಟ್

ತಾನು ಎರಡನೇ ಬಹದ್ದೂರ್‌ ಶಾ ಜಫರ್‌ ಅವರ ಮೊಮ್ಮಗನ ವಿಧವಾ ಪತ್ನಿ ಎಂದು ಸುಲ್ತಾನಾ ಬೇಗಂ ಹೇಳಿಕೊಂಡಿದ್ದರು. ತಮ್ಮ ಕುಟುಂಬದ ಸ್ವಾಧೀನದಲ್ಲಿದ್ದ ಕೆಂಪುಕೋಟೆ 1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷರ ವಶವಾಯಿತು. ಬಳಿಕ ಬಹದ್ದೂರ್ ಶಾ ಜಫರ್ ಅವರನ್ನು ದೇಶದಿಂದ ಗಡಿಪಾರು ಮಾಡಲಾಯಿತು. ಕೆಂಪುಕೋಟೆಯ ಸ್ವಾಮ್ಯ ಮೊಘಲರ ಕೈತಪ್ಪಿತು ಎಂದು ಅರ್ಜಿದಾರೆ ವಾದಿಸಿದ್ದರು.

ಅವರ ವಾದವನ್ನು ದೆಹಲಿ ಹೈಕೋರ್ಟ್‌ ಏಕಸದಸ್ಯ ಪೀಠ ಈ ಹಿಂದೆ ತಿರಸ್ಕರಿಸಿತ್ತು. 2021ರಲ್ಲಿ ಅರ್ಜಿಯನ್ನು ತಿರಸ್ಕರಿಸುವ ವೇಳೆ ಏಕಸದಸ್ಯ ಪೀಠವು, ಈಸ್ಟ್‌ ಇಂಡಿಯಾ ಕಂಪನಿಯಿಂದ ಎರಡನೇ ಬಹದ್ದೂರ್‌ ಶಾ ಜಫರ್‌ ಅವರಿಗೆ ಕಾನೂನುಬಾಹಿರವಾಗಿ ವಂಚನೆಯಾಗಿದೆ ಎಂದೇ ಭಾವಿಸಿದರೂ, ಅರ್ಜಿದಾರರ ಪೂರ್ವಜರಿಗೆ ಇದೆಲ್ಲರದ ಅರಿವಿತ್ತು ಎನ್ನುವುದು ಅರ್ಜಿದಾರರ ಒಪ್ಪಿತ ನಿಲುವಾಗಿರುವಾಗ 164 ವರ್ಷಗಳ ವಿಳಂಬದ ನಂತರವೂ ಈ ರಿಟ್‌ ಅರ್ಜಿ ಹೇಗೆ ನಿರ್ವಹಣಾ ಯೋಗ್ಯವಾಗುತ್ತದೆ ಎಂದು ಆಕ್ಷೇಪಿಸಿ ಅರ್ಜಿಯನ್ನು ವಜಾಗೊಳಿಸಿತ್ತು.

ಇದನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಅರ್ಜಿದಾರೆಯು ಮೇಲ್ಮನವಿ ಸಲ್ಲಿಸಿದ್ದರು. ಆದರೆ ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸುವಲ್ಲಿ ಎರಡೂವರೆ ವರ್ಷಗಳಷ್ಟು ವಿಳಂಬವಾಗಿದೆ ಎಂಬ ಕಾರಣ ನೀಡಿ ವಿಭಾಗೀಯ ಪೀಠ ಆಕೆಯ ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಸುಲ್ತಾನಾ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.