Arvind Kejriwal, Supreme Court and ED  
ಸುದ್ದಿಗಳು

ದೆಹಲಿ ಮುಖ್ಯಮಂತ್ರಿ ಹುದ್ದೆಯಿಂದ ಕೇಜ್ರಿವಾಲ್ ಪದಚ್ಯುತಿ ಕೋರಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಈ ರೀತಿಯ ವಿಚಾರಗಳ ಕುರಿತಂತೆ ನ್ಯಾಯಾಲಯ ನಿರ್ಧರಿಸುವಂತಿಲ್ಲ ಅದು ದೆಹಲಿಯ ಲೆ. ಗವರ್ನರ್ ಅವರಿಗೆ ಬಿಟ್ಟದ್ದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಇಂದು ತಿಳಿಸಿತು.

Bar & Bench

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕೇಜ್ರಿವಾಲ್ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಈ ಮನವಿ ಸಲ್ಲಿಸಲಾಗಿತ್ತು.

ಈ ರೀತಿಯ ವಿಚಾರಗಳ ಕುರಿತಂತೆ ನ್ಯಾಯಾಲಯ ನಿರ್ಧರಿಸುವಂತಿಲ್ಲ ಅದು ದೆಹಲಿಯ ಲೆ. ಗವರ್ನರ್‌ ಅವರಿಗೆ ಬಿಟ್ಟದ್ದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಇಂದು ತಿಳಿಸಿತು.

 ಇ ಡಿ  ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸಲು ನಿರ್ದೇಶನ ಕೋರಿ ಸಲ್ಲಿಸಲಾದ ಮನವಿಯನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿತ್ತು.

ಅರ್ಜಿದಾರರು ನ್ಯಾಯಾಲಯವನ್ನು ರಾಜಕೀಯಕ್ಕೆ ಎಳೆಯಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದ ಹೈಕೋರ್ಟ್‌ ₹ 50,000 ದಂಡ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಪ್ರಸ್ತುತ ಅರ್ಜಿ ಸಲ್ಲಿಸಲಾಗಿತ್ತು.

ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್‌ ಕೇಜ್ರಿವಾಲ್‌ ಅವರಿಗೆ ಜಾಮೀನು ನೀಡಿತ್ತು. ಆದರೆ ಅವರು ಮುಖ್ಯಮಂತ್ರಿಯ ಕೆಲಸಗಳನ್ನು ನಿರ್ವಹಿಸುವಂತಿಲ್ಲ. ಯಾವುದೇ ಅಧಿಕೃತ ಕಡತಗಳಿಗೆ ಸಹಿ ಹಾಕುವಂತಿಲ್ಲ ಇಲ್ಲವೇ ಮುಖ್ಯಮಂತ್ರಿ ಕಚೇರಿ ಬಳಸುವಂತಿಲ್ಲ ಎಂದು ಅದು ಆದೇಶಿಸಿತ್ತು.

ಇದಕ್ಕೂ ಮುನ್ನ, ಕೇಜ್ರಿವಾಲ್‌ ಪದಚ್ಯುತಿ ಕೋರಿ ಮಾರ್ಚ್ 28ರಂದು, ಸುರ್ಜಿತ್ ಸಿಂಗ್ ಯಾದವ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ನಂತರ, ಏಪ್ರಿಲ್ 4 ರಂದು, ಹಿಂದೂ ಸೇನೆಯ ಅಧ್ಯಕ್ಷರಾದ ವಿಷ್ಣು ಗುಪ್ತಾ ಅವರ ಇದೇ ಬಗೆಯ ಅರ್ಜಿಯನ್ನು ವಿಚಾರಣೆ ನಡೆಸುವುದಿಲ್ಲ ಎಂದಿತ್ತು. ಸಿ ಎಂ ಆಗಿ ಮುಂದುವರೆಯುವುದು ಕೇಜ್ರಿವಾಲ್‌ ಅವರ ವೈಯಕ್ತಿಕ ನಿರ್ಧಾರ ಎಂದು ಪೀಠ ಆಗ ನುಡಿದಿತ್ತು.