ಸುದ್ದಿಗಳು

ಶೇ 100ರಷ್ಟು ವಿವಿಪ್ಯಾಟ್ ಮತ ಪರಿಶೀಲನೆ: ತೃಣಮೂಲ ಕಾಂಗ್ರೆಸ್ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Bar & Bench

ಚುನಾವಣಾ ಫಲಿತಾಂಶಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಇವಿಎಂ ಮತ ಎಣಿಕೆಯೊಂದಿಗೆ ಮತಚೀಟಿಯನ್ನು ಮತಯಂತ್ರದೊಂದಿಗೆ ತಾಳೆ ಮಾಡುವ ವಿವಿಪ್ಯಾಟ್‌ಗಳನ್ನು ಶೇ ನೂರರಷ್ಟು ಅಳವಡಿಸಬೇಕು ಎಂದು ಕೋರಿ ತೃಣಮೂಲ ಕಾಂಗ್ರೆಸ್ಸಿನ ಗೋಪಾಲ್ ಸೇಠ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.

ಅರ್ಜಿಗೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣ್ಯಂ ಅವರಿದ್ದ ತ್ರಿಸದಸ್ಯ ಪೀಠ ತಿಳಿಸಿದೆ. ಪಿಐಎಲ್ ಅನ್ನು ವಜಾಗೊಳಿಸುವ ವೇಳೆ ನ್ಯಾ. ಬೊಬ್ಡೆ ಅವರು ʼಮುಕ್ತ ಮತ್ತು ನ್ಯಾಯಯುತ ಚುನಾವಣೆ ನಾಗರಿಕರ ಹಕ್ಕುʼ ಎಂಬುದನ್ನು ಪೀಠ ಒಪ್ಪುತ್ತದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಭಾರತದ ಚುನಾವಣಾ ಆಯೋಗಕ್ಕೆ ಅಹವಾಲು ಸಲ್ಲಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಅರ್ಜಿದಾರರ ಪರ ವಕೀಲ ಪಿಜುಶ್ ಕೆ ರಾಯ್ ಅವರನ್ನು ನ್ಯಾ. ಬೊಬ್ಡೆ ಪ್ರಶ್ನಿಸಿದರು. ಇದಕ್ಕೆ ಸಕಾರಾರತ್ಮಕವಾಗಿ ಪ್ರತಿಕ್ರಿಯಿಸಿದ ಪಿಜುಶ್‌ ಅವರು ಚುನಾವಣಾ ಆಯೋಗ ಮನವಿಯನ್ನು ಶ್ಲಾಘಿಸಿದ್ದು ಸುಪ್ರೀಂಕೋರ್ಟ್‌ ಮಾತ್ರವೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿತ್ತು ಎಂಬುದಾಗಿ ತಿಳಿಸಿದರು.

"ಹಸ್ತಕ್ಷೇಪ ಮಾಡುವಂತೆ ಕೋರುತ್ತಿಲ್ಲ. ಚುನಾವಣೆ ಇನ್ನೂ ನಡೆಯುತ್ತಿದೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆ ಹಕ್ಕಿನ ಸಂಗತಿ" ಎಂದು ರಾಯ್ ವಾದಿಸಿದರು. ಆದರೆ ಇದರಿಂದ ಪ್ರಭಾವಿತವಾಗದ ಪೀಠ ಅರ್ಜಿಯನ್ನು ವಜಾಗೊಳಿಸಿತು.

ಶೇಕಡಾ 50 ರಷ್ಟು ವಿವಿಪ್ಯಾಟ್‌ ಚೀಟಿಗಳ ಭೌತಿಕ ಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು 2019ರಲ್ಲಿ, ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ತಿರಸ್ಕರಿಸಿತ್ತು.