Supreme Court and Bilkis Bano
Supreme Court and Bilkis Bano 
ಸುದ್ದಿಗಳು

ಅತ್ಯಾಚಾರ ಅಪರಾಧಿಗಳ ಬಿಡುಗಡೆ: ಬಿಲ್ಕಿಸ್ ಬಾನೊ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Bar & Bench

ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗಳ ಶಿಕ್ಷೆಯನ್ನು ತಗ್ಗಿಸುವ ವಿಚಾರವಾಗಿ ಸರ್ವೋಚ್ಚ ನ್ಯಾಯಾಲಯ ಈ ಹಿಂದೆ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಗುಜರಾತ್‌ ಹತ್ಯಾಕಾಂಡದ ವೇಳೆ ಅತ್ಯಾಚಾರಕ್ಕೀಡಾದ ಸಂತ್ರಸ್ತೆ ಬಿಲ್ಕಿಸ್‌ ಬಾನೋ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಅಪರಾಧಿಗಳ ಕ್ಷಮಾಪಣೆಗೆ ಸಂಬಂಧಿಸಿದಂತೆ ಅಪರಾಧ ಘಟಿಸಿದ ರಾಜ್ಯದಲ್ಲಿ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಅಸ್ತಿತ್ವದಲ್ಲಿದ್ದ ನೀತಿಯಂತೆ ಅಪರಾಧಿಗಳ ಬಿಡುಗಡೆಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ಕಳೆದ ಮೇ 13ರಂದು ತೀರ್ಪು ನೀಡಿತ್ತು. ಈ ತೀರ್ಪಿನ ಮರುಪರಿಶೀಲನೆ ಕೋರಿ ಬಿಲ್ಕಿಸ್‌ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಬಿಲ್ಕಿಸ್‌ ಯಾಕೂಬ್‌ ರಸೂಲ್‌ (ಬಿಲ್ಕಿಸ್ ಬಾನೊ) ಮನವಿಯನ್ನು ಡಿ.13ರಂದು ವಜಾಗೊಳಿಸಿದೆ. ಈ ಕುರಿತ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ ಸಹಾಯಕ ರಿಜಿಸ್ಟ್ರಾರ್‌ ಅವರು ಬಾನೊ ಪರ ವಕೀಲೆ ಶೋಭಾ ಗುಪ್ತಾ ಅವರಿಗೆ ಪತ್ರ ಮುಖೇನ ನೀಡಿದ್ದಾರೆ.

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮುಗಲಭೆ ವೇಳೆ ದಹೋಡ್ ಜಿಲ್ಲೆಯ ಲಿಮ್‌ಖೆಡಾ ತಾಲ್ಲೂಕಿನಲ್ಲಿ ಬಾನೋ ಅವರ ಮೇಲೆ ಗಲಭೆಕೋರರ ಗುಂಪು ಸಾಮೂಹಿಕ ಅತ್ಯಾಚಾರ ಎಸಗಿತ್ತು. ಅಲ್ಲದೆ ಇದೇ ವೇಳೆ ಗಲಭೆಕೋರರ ಗುಂಪು ಹನ್ನೆರಡು ಜನರನ್ನು ಹತ್ಯೆಗೈದಿತ್ತು. ಇದರಲ್ಲಿ ಬಾನೋ ಅವರ ಮೂರು ವರ್ಷದ ಮಗಳು ಕೂಡ ಸೇರಿದ್ದಳು.

ಮಹಾರಾಷ್ಟ್ರದಲ್ಲಿ ವಿಚಾರಣೆ ನಡೆದಿರುವುದರಿಂದ, ಕೈದಿಗಳ ಬಿಡುಗಡೆಗೆ ಸಂಬಂಧಿಸಿದ 1992ರ ಗುಜರಾತ್‌ ನೀತಿ ಬದಲಿಗೆ ಮಹಾರಾಷ್ಟ್ರದ ಬಿಡುಗಡೆ ನೀತಿಯನ್ನೇ ಅನ್ವಯಿಸಬೇಕು ಎಂದು ಮರುಪರಿಶೀಲನಾ ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು.

ತೀರ್ಪಿನ ವಿರುದ್ಧ ಬಾನೊ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯಲ್ಲಿ ʼಮಹಾರಾಷ್ಟ್ರದಲ್ಲಿ ವಿಚಾರಣೆ ನಡೆದಿರುವುದರಿಂದ, ಕೈದಿಗಳ ಬಿಡುಗಡೆಗೆ ಸಂಬಂಧಿಸಿದ 1992ರ ಗುಜರಾತ್‌ ನೀತಿ ಬದಲಿಗೆ ಮಹಾರಾಷ್ಟ್ರದ ಬಿಡುಗಡೆ ನೀತಿಯನ್ನೇ ಅನ್ವಯಿಸಬೇಕುʼ ಎಂದು ಕೋರಲಾಗಿತ್ತು.

ಗುಜರಾತ್‌ ಸರ್ಕಾರದ 1992ರ ಅಪರಾಧಿಗಳ ಬಿಡುಗಡೆ ನೀತಿ ಅನ್ವಯವೇ ತನ್ನನ್ನು ಬಿಡುಗಡೆ ಮಾಡುವಂತೆ  ‌ಅಪರಾಧಿಗಳಲ್ಲೊಬ್ಬನಾದ ರಾಧೇಶ್ಯಾಮ್ ಭಗವಾನ್‌ ದಾಸ್ ಶಾ ಅಲಿಯಾಸ್‌ ಲಾಲಾ ವಕೀಲ್‌ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ತೀರ್ಪು ಪ್ರಕಟಿಸಿತ್ತು.