ಪ್ರತಿ ಸೋಮವಾರ ಮತ್ತು ಗುರುವಾರದಂದು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಎಂಬ ಜಾಮೀನು ಷರತ್ತು ಸಡಿಲಿಕೆ ಕೋರಿ ದೆಹಲಿ ಅಬಕಾರಿ ನೀತಿ ಪ್ರಕರಣದ ಆರೋಪಿ, ಮಾಜಿ ಉಪಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ಪುರಸ್ಕರಿಸಿದೆ [ಮನೀಶ್ ಸಿಸೋಡಿಯಾ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ವಾರಕ್ಕೆ ಎರಡು ಬಾರಿ ತನಿಖಾಧಿಕಾರಿ ಎದುರು ವರದಿ ಮಾಡಿಕೊಳ್ಳಬೇಕಿದ್ದ ಜಾಮೀನು ಷರತ್ತನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಸಡಿಲಗೊಳಿಸಿತು. ಆದರೆ, ಸಿಸೋಡಿಯಾ ತಪ್ಪದೇ ವಿಚಾರಣೆಗೆ ಹಾಜರಾಗಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.
"ವಾರಕ್ಕೆ ಎರಡು ಬಾರಿ ಪೊಲೀಸ್ ಠಾಣೆಗೆ ಭೇಟಿ ನೀಡಬೇಕಾದ ಷರತ್ತು ಸಡಿಲಿಸಲು ಅರ್ಜಿ ಸಲ್ಲಿಸಲಾಗಿತ್ತು. ಷರತ್ತು ಅಗತ್ಯವಿಲ್ಲ ಎಂದು ನಾವು ಭಾವಿಸಿದ್ದು ಹೀಗಾಗಿ ತೆಗೆದು ಹಾಕುತ್ತಿದ್ದೇವೆ. ಆದರೂ, ಅರ್ಜಿದಾರರು ನಿಯಮಿತವಾಗಿ ವಿಚಾರಣೆಗೆ ಹಾಜರಾಗಬೇಕು" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಎರಡೂ ದಾಖಲಿಸಿದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಕಳೆದ ಆಗಸ್ಟ್‌ನಲ್ಲಿ ಸಿಸೋಡಿಯಾಗೆ ಜಾಮೀನು ನೀಡಿತ್ತು.
ವಿಚಾರಣೆಗೆ ಸುದೀರ್ಘ ವಿಳಂಬವಾಗಿರುವುದರಿಂದ ಸಂವಿಧಾನದ 21ನೇ ವಿಧಿಯಡಿ ಸ್ವಾತಂತ್ರ್ಯದ ಮತ್ತೊಂದು ಮುಖವಾದ ತ್ವರಿತ ವಿಚಾರಣೆಯ ಹಕ್ಕು ಉಲ್ಲಂಘಿತವಾಗಿದೆ ಎಂದ ಪೀಠ ಅರ್ಜಿ ಪುರಸ್ಕರಿಸಿತು. ಫೆಬ್ರವರಿ 26, 2023ರಿಂದ ಕಳೆದ ಆಗಸ್ಟ್‌ನಲ್ಲಿ ಜಾಮೀನು ಪಡೆಯುವವರೆಗೆ ಸಿಸೋಡಿಯಾ ಬಂಧನದಲ್ಲಿದ್ದರು.
ಸಿಸೋಡಿಯಾ ಅವರ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ವಕೀಲರಾದ ವಿವೇಕ್ ಜೈನ್, ಮೊಹಮ್ಮದ್ ಇರ್ಷಾದ್, ಸುಚಿತ್ರಾ ಕುಂಭಟ್, ಅಮಿತ್ ಭಂಡಾರಿ, ರಜತ್ ಜೈನ್ ಮತ್ತು ಸಾದಿಕ್ ನೂರ್ ವಾದ ಮಂಡಿಸಿದ್ದರು . ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ಜಾರಿ ನಿರ್ದೇಶನಾಲಯವನ್ನು (ಇ ಡಿ) ಪ್ರತಿನಿಧಿಸಿದ್ದರು.