Arvind Kejriwal, Supreme Court and ED  
ಸುದ್ದಿಗಳು

ಇ ಡಿ ಬಂಧನ, ರಿಮ್ಯಾಂಡ್‌ ಆದೇಶ ಪ್ರಶ್ನಿಸಿ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿ ಆದೇಶ ಕಾಯ್ದರಿಸಿದ ಸುಪ್ರೀಂ

Bar & Bench

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸಲ್ಲಿಸಿರುವ ಅರ್ಜಿಯ ಕುರಿತಾದ ಆದೇಶವನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ಕಾಯ್ದಿರಿಸಿದೆ.

ಲಿಖಿತ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತ ನೇತೃತ್ವದ ವಿಭಾಗೀಯ ಪೀಠವು ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಬಂಧಿಸಿದ ಬಳಿಕ ಕೇಜ್ರಿವಾಲ್‌ ಬಂಧಿಸಲು ಸಮರ್ಥಿನೀಯವಾದ ಯಾವೆಲ್ಲಾ ಹೊಸ ದಾಖಲೆಗಳು ದೊರೆತಿವೆ ಎಂಬ ಮಾಹಿತಿಯನ್ನು ಸಲ್ಲಿಸುವಂತೆ ಆದೇಶಿಸಿದೆ.

“ವಾದ ಆಲಿಸಲಾಗಿದ್ದು, ಆದೇಶ ಕಾಯ್ದಿರಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ, ಕೇಜ್ರಿವಾಲ್‌ ಅವರು ಜಾಮೀನಿಗೆ ಅರ್ಜಿ ಸಲ್ಲಿಸಲು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಕೇಜ್ರಿವಾಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಕೇಜ್ರಿವಾಲ್ ಬಂಧನವನ್ನು ಸಮರ್ಥಿಸಲು ಜಾರಿ ನಿರ್ದೇಶನಾಲಯ ಈಗ ಉಲ್ಲೇಖಿಸಿರುವ ವಿಷಯವು ಅವರ ಬಂಧನದ ಸಮಯದಲ್ಲಿ ಇರಲಿಲ್ಲ ಎಂದು ವಾದಿಸಿದರು.

“2023ರ ಆಗಸ್ಟ್‌ನಲ್ಲಿ ₹100 ಕೋಟಿ ಆರೋಪ ಮಾಡಲಾಗಿದೆ. ಇದು ಹಳೆಯ ವಿಷಯವಾಗಿದ್ದು, 2024ರ ಮಾರ್ಚ್‌ನಲ್ಲಿ ಬಂಧಿಸಲಾಗಿದೆ… ಯಾವುದೇ ಹಣ ವರ್ಗಾವಣೆ ಮಾಡಲಾಗಿಲ್ಲ” ಎಂದು ಸುದೀರ್ಘವಾಗಿ ವಾದಿಸಿದರು.