Supreme Court 
ಸುದ್ದಿಗಳು

ಸುಪ್ರೀಂ ಕೋರ್ಟ್‌ ಎಷ್ಟಾದರೂ ಆದೇಶ ಹೊರಡಿಸಬಹುದು, ಸಂಸತ್‌ ಅದನ್ನು ಬದಿಗೆ ಸರಿಸಿ ಕಾನೂನು ಮಾಡಬಹುದು ಎಂದ ಕೇಂದ್ರ

ನ್ಯಾಯಾಲಯ ಹೊರಡಿಸಿದ ಯಾವ ಆದೇಶವನ್ನು ಜಾರಿಗೊಳಿಸಬೇಕು ಮತ್ತು ಯಾವುದನ್ನು ಜಾರಿಗೊಳಿಸಬಾರದು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸಲಾಗದು ಎಂದು ನ್ಯಾಯಮೂರ್ತಿ ರವೀಂದ್ರ ಭಟ್‌ ಹೇಳಿದ್ದಾರೆ.

Bar & Bench

ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಉಲ್ಲಂಘಿಸಿ ಕಾನೂನು ರೂಪಿಸುವ ಅಧಿಕಾರ ಸಂಸತ್ತಿಗಿದೆ ಎಂದು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರ ಮೂಲಕ ಕೇಂದ್ರ ಸರ್ಕಾರವು ಗುರುವಾರ ಸರ್ವೋಚ್ಚ‌ ನ್ಯಾಯಾಲಯಕ್ಕೆ ತಿಳಿಸಿದೆ.

ನ್ಯಾಯಾಧಿಕರಣ ಸುಧಾರಣೆಗಳ (ಪರಿಷ್ಕಾರ ಮತ್ತು ಸೇವಾ ಷರತ್ತುಗಳು) ಸುಗ್ರೀವಾಜ್ಞೆ 2021ರ ಸೆಕ್ಷನ್‌ಗಳಾದ 12 ಮತ್ತು 13 ಮತ್ತು ಆರ್ಥಿಕ ಕಾಯಿದೆ 2017ರ ಸೆಕ್ಷನ್‌ಗಳಾದ 184 ಮತ್ತು 186(2) ಅನ್ನು ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ಮಾಡಿದ್ದನ್ನು ಪ್ರಶ್ನಿಸಿ ಮದ್ರಾಸ್‌ ವಕೀಲರ ಪರಿಷತ್‌ ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ವೇಣುಗೋಪಾಲ್‌ ಅವರು ಮೇಲಿನಂತೆ ಹೇಳಿದರು.

ಆರ್ಥಿಕ ಕಾಯಿದೆಯ ಸೆಕ್ಷನ್ 184 (11)ಗೆ ನೀಡಲಾದ ಪೂರ್ವಾನ್ವಯದ ಪರಿಣಾಮವು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಅತಿಕ್ರಮಿಸುತ್ತದೆ ಎಂಬುದು ವಿಚಾರಣೆಯ ಒಂದು ಪ್ರಮುಖ ಅಂಶವಾಗಿತ್ತು.

“ನೀವು ಕಾನೂನು ಜಾರಿಗೊಳಿಸುವುದಾದರೆ ಈ ನ್ಯಾಯಾಲಯದ ತೀರ್ಪುಗಳನ್ನು ನೀವೇಕೆ ರದ್ದುಗೊಳಿಸುತ್ತಿಲ್ಲ?” ಎಂದು ನ್ಯಾಯಮೂರ್ತಿ ಹೇಮಂತ್‌ ಗುಪ್ತಾ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವೇಣುಗೋಪಾಲ್‌ ಅವರು “ಇದನ್ನು ಹೇಳಲು ನಾನು ವಿಷಾದಿಸುತ್ತೇನೆ ಮೈಲಾರ್ಡ್‌. ನೀವು ಎಷ್ಟು ಬೇಕಾದರೂ ಆದೇಶ ಹೊರಡಿಸಿ. ಆದರೆ, ಇದು (ನ್ಯಾಯಾಲಯದ ಆದೇಶ) ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದು ಹೇಳಿ ಸಂಸತ್‌ ಕಾನೂನು ಜಾರಿಗೊಳಿಸಬಹುದು” ಎಂದರು.

ನ್ಯಾಯಾಲಯದ ಯಾವ ಆದೇಶವನ್ನು ಜಾರಿಗೊಳಿಸಬೇಕು ಮತ್ತು ಯಾವುದನ್ನು ಜಾರಿಗೊಳಿಸಬಾರದು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸಲಾಗದು ಎಂದು ನ್ಯಾಯಮೂರ್ತಿ ರವೀಂದ್ರ ಭಟ್‌ ಈ ಸಂದರ್ಭದಲ್ಲಿ ಹೇಳಿದರು.

“ಸಂಸದೀಯ ಸ್ಥಾಯಿ ಸಮಿತಿಯ ಮೂಲಕ ಸರ್ಕಾರವು (ಕಾನೂನುಗಳನ್ನು) ನಿರ್ಧಾರ ಮಾಡುತ್ತದೆ ನ್ಯಾಯಾಲಯಗಳು ಕಾನೂನನ್ನು ರದ್ದುಗೊಳಿಸುವಂತಿಲ್ಲ ಎನ್ನುವುದಾದರೆ ನಾವು ಮಾರ್ಬರಿ ಪೂರ್ವ (ಅಮೆರಿಕದ ಸಂವಿಧಾನಕ್ಕೆ ವಿರುದ್ಧವಾದ ಕಾನೂನು ಮತ್ತು ಶಾಸನಗಳನ್ನು ರದ್ದುಗೊಳಿಸುವ ಅಧಿಕಾರವನ್ನು ಅಮೆರಿಕದ ನ್ಯಾಯಾಲಯಗಳಿಗೆ ನೀಡಿರುವುದು) ದಿನಗಳಿಗೆ ತೆರಳಿದಂತಾಗುತ್ತದೆ. ಕೆಲವೊಮ್ಮೆ ನಾವು ಕಾನೂನನ್ನು ಮಿತಿಗೊಳಿಸಿ ವ್ಯಾಖ್ಯಾನಿಸುತ್ತೇವೆ ಅಥವಾ ಅವುಗಳನ್ನು ರದ್ದುಗೊಳಿಸುತ್ತೇವೆ. ಸರ್ಕಾರ ರೂಪಿಸಿದ ಕಾನೂನು ಸಂವಿಧಾನ ವಿರೋಧಿ ಎಂದು ನ್ಯಾಯಾಲಯ ಹೇಳಿದರೆ ಅದು ಸಂವಿಧಾನ ವಿರೋಧಿಯಷ್ಟೆ. ಆದರೆ, ನೀವು ಈಗ ಹೇಳಿದಂತೆ ಯಾವುದು ಜಾರಿಗೊಳಿಸಬಹುದಾದ ಆದೇಶ ಎನ್ನುವುದನ್ನು ಸಂಸತ್ತು ಹೇಳುತ್ತದೆ ಎಂದಾದರೆ ಅದರರ್ಥ ಯಾವುದು ಸಿಂಧು ಎನ್ನುವುದನ್ನು ಸಂಸತ್ತು ನಿರ್ಧರಿಸುತ್ತದೆ ಎಂದಾಗುತ್ತದೆ. ಆದರೆ ಅದು ಹಾಗಲ್ಲ” ಎಂದು ಅವರು ವಿವರಿಸಿದರು.

ಮದ್ರಾಸ್‌ ಹೈಕೋರ್ಟ್‌ 1986ರಲ್ಲಿ ಈ ಹೋರಾಟ (ನ್ಯಾಯಾಧಿಕರಣಗಳ ಸ್ವಾತಂತ್ರ್ಯ ರಕ್ಷಣೆ) ಆರಂಭಿಸಿದ್ದು, 36 ವರ್ಷಗಳಾದರೂ ಆ ಸಂಸ್ಥೆಗಾಗಿ ಹೋರಾಟ ಮಾಡುತ್ತಿರುವುದಾಗಿ ಅರ್ಜಿದಾರರ ಪರ ಹಿರಿಯ ವಕೀಲ ಅರವಿಂದ್‌ ದಾತಾರ್‌ ಹೇಳಿದರು. “ಸೇನಾಧಿಕಾರಿಯ ವಿಧವಾ ಪತ್ನಿ ಅಮೆರಿಕ ನ್ಯಾಯಾಲಯದ ಮಾರ್ಬರಿ ತತ್ವಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆಕೆಗೆ 12 ರಿಂದ 18 ತಿಂಗಳ ಒಳಗೆ ನ್ಯಾಯಬೇಕು. ಈ ಮುಖಾಮುಖಿ ಏಕೆ?” ಎಂದು ದಾತಾರ್‌ ಪ್ರಶ್ನಿಸಿದರು. ಅಂತಿಮವಾಗಿ ಪೀಠವು ತೀರ್ಪು ಕಾಯ್ದಿರಿಸಿದೆ.