ಶಸ್ತ್ರಚಿಕಿತ್ಸೆ ನೇರ ಪ್ರಸಾರದ (ಎಲ್‌ಎಸ್‌ಬಿ) ವೇಳೆ ವೀಕ್ಷಕರೊಂದಿಗೆ ವೈದ್ಯರು ನೇರ ಚರ್ಚೆಯಲ್ಲಿ ಭಾಗಿಯಾಗುವುದನ್ನು ಅಥವಾ ಪ್ರಶ್ನೆಗಳಿಗೆ ಉತ್ತರಿಸುವುದನ್ನು ತಡೆಯುವಂತೆ ಕೋರಿ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ನೋಟಿಸ್ ನೀಡಿದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಮೂರು ವಾರದೊಳಗೆ ಅದಕ್ಕೆ ಉತ್ತರಿಸುವಂತೆ ಸೂಚಿಸಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಶಸ್ತ್ರಚಿಕಿತ್ಸೆ ವೇಳೆ ಶಸ್ತ್ರಚಿಕಿತ್ಸಕರು ನೇರ ಚರ್ಚೆಯಲ್ಲಿ ತೊಡಗಿಸಿಕೊಳ್ಳುವ ಪರಿಪಾಠವು ಕ್ರಿಕೆಟಿಗನೊಬ್ಬ ಕ್ರಿಕೆಟ್ ಆಡುವುದಷ್ಟೇ ಅಲ್ಲದೆ ಲೈವ್ ಕಾಮೆಂಟರಿ ನೀಡುವ ಅಸಂಭವ ಸನ್ನಿವೇಶದಂತಾಗುತ್ತದೆ ಎಂದರು.
“ಇದು ವಿರಾಟ್ ಕೊಹ್ಲಿ ಕ್ರಿಕೆಟ್ ಆಡುತ್ತಾ ಲೈವ್ ಕಾಮೆಂಟರಿ ನೀಡಿದಂತಿದೆ. ಅನೇಕ ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಏಮ್ಸ್‌ನಲ್ಲೂ ಹೀಗೆ ಶಸ್ತ್ರಚಿಕಿತ್ಸೆ ನಡೆಸುವಾಗ ರೋಗಿಯೊಬ್ಬರು ಮೃತಪಟ್ಟರು. ವಿದೇಶಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಾರೆ ಎನ್ನುವ ಕಾರಣಕ್ಕೆ ಅನೇಕ ರೋಗಿಗಳು ಶಸ್ತ್ರಚಿಕಿತ್ಸೆಯ ನೇರಪ್ರಸಾರಕ್ಕೆ ಒಪ್ಪಿಕೊಳ್ಳುತ್ತಾರೆ” ಎಂದು ಅವರು ವಿವರಿಸಿದರು.
ಈ ರೀತಿಯ ಅಭ್ಯಾಸವನ್ನು ಈಗಾಗಲೇ ವಿದೇಶಗಳಲ್ಲಿ ನಿಷೇಧಿಸಲಾಗಿದೆ. ಹೀಗೆ ನೇರ ಪ್ರಸಾರದ ವೇಳೆ ಸಂವಾದದಲ್ಲಿ ವೈದ್ಯರು ತೊಡಗಿದ್ದರಿಂದ ಏಮ್ಸ್ ಆಸ್ಪತ್ರೆಯ ಆಪರೇಷನ್ ಕೊಠಡಿಯಲ್ಲಿ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ವಿವರಿಸಿದರು.
ಶಸ್ತ್ರಚಿಕಿತ್ಸೆ ಕೈಗೊಂಡವರ ಗಮನ ಆಪರೇಷನ್ ಥೀಯೇಟರ್ ಹೊರಗಿರುವ ವ್ಯಕ್ತಿಗಳ ಕಡೆಗೆ ಹರಿಯುವುದರಿಂದ ಶಸ್ತ್ರಚಿಕಿತ್ಸೆ ನೇರ ಪ್ರಸಾರ ಎಂಬುದು ನೈತಿಕ ಕಳವಳ ಉಂಟುಮಾಡುತ್ತದೆ. ರೋಗಿಗಳಿಗೆ ಶಸ್ತ್ರಚಿಕಿತ್ಸಾ ವೆಚ್ಚದ ವಿನಾಯತಿ ನೀಡಲಾಗುತ್ತದೆ. ಆದರೆ ಅವರಿಗೆ ಶಸ್ತ್ರಚಿಕಿತ್ಸೆಯ ವಿಧಾನವನ್ನು ಸ್ಪಷ್ಟವಾಗಿ ತಿಳಿಸಲಾಗುವುದಿಲ್ಲ. ಜಾಹೀರಾತು ಮತ್ತು ಪ್ರಾಯೋಜಕತ್ವದ ಆಸೆಗೆ ಶಸ್ತ್ರಚಿಕಿತ್ಸೆ ನೇರ ಪ್ರಸಾರಕ್ಕೆ ಆಸ್ಪದ ನೀಡಲಾಗುತ್ತದೆ ಎಂದು ಅವರು ದೂರಿದ್ದಾರೆ.