Justice V Gopala Gowda 
ಸುದ್ದಿಗಳು

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡರ ಮುಡಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಚಿಕ್ಕಬಳ್ಳಾಪುರದವರಾದ ನ್ಯಾ. ಗೋಪಾಲಗೌಡ ಅವರು 2012ರಿಂದ 2016ರವರೆಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಅವರು ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

Bar & Bench

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ ಅವರು ನ್ಯಾಯಾಂಗ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಚಿಕ್ಕಬಳ್ಳಾಪುರದವರಾದ ನ್ಯಾ. ಗೋಪಾಲಗೌಡ ಅವರು 2012ರಿಂದ 2016ರವರೆಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಅವರು ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಪೆಡ್ಡೂರಿನಲ್ಲಿ 06.10.1951ರಂದು ಜನಿಸಿದ ನ್ಯಾ. ಗೋಪಾಲಗೌಡರು ಚಿಂತಾಮಣಿಯ ಪ್ರಥಮ ದರ್ಜೆ ಕಾಲೇಜಿನಿಂದ ಬಿಎಸ್ಸಿ ಪದವಿ ಪಡೆದು, ಬೆಂಗಳೂರಿನ ಎಸ್‌ಜೆಆರ್‌ಎಲ್‌ಸಿ ಕಾಲೇಜಿನಲ್ಲಿ 1975ರಲ್ಲಿ ಕಾನೂನು ಪದವಿ ಪಡೆದರು. 14.11.1975ರಂದು ವಕೀಲರಾಗಿ ನೋಂದಣಿ ಮಾಡಿಸಿದ್ದ ನ್ಯಾ. ಗೋಪಾಲಗೌಡರು 1979ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸ್ವತಂತ್ರವಾಗಿ ಪ್ರಾಕ್ಟೀಸ್‌ ಆರಂಭಿಸಿದರು.

11.6.1997ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಗೋಪಾಲಗೌಡರು 3.6.1999ರಂದು ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

23.06.2006 ರಿಂದ 23.03.2010ರವರೆಗೆ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ 07.01.2009 ರಿಂದ 6.1.2011ರವರೆಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು. 25.3.2010ರಂದು ಒಡಿಶಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಗೋಪಾಲಗೌಡರು 24.12.2012ರಂದು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದರು. 2016ರ ವರೆಗೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು.