ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ 
ಸುದ್ದಿಗಳು

ಎಸ್‌ಸಿ/ಎಸ್‌ಟಿ ಪ್ರಮಾಣಾನುಗುಣ ಪ್ರಾತಿನಿಧ್ಯ: ಕ್ಷೇತ್ರ ಮರುವಿಂಗಡಣೆ ಆಯೋಗಕ್ಕೆ ಮರುಜೀವ ನೀಡಲು ಸುಪ್ರೀಂ ಸಲಹೆ

ಪ. ಬಂಗಾಳ ಮತ್ತು ಸಿಕ್ಕಿಂ ವಿಧಾನಸಭೆಗಳಲ್ಲಿ ಪರಿಶಿಷ್ಟ ಪಂಗಡಗಳಿಗೆ ಪ್ರಮಾಣಾನುಗುಣ ಪ್ರಾತಿನಿಧ್ಯ ಕೋರಿ ಸಲ್ಲಿಸಲಾಗಿದ್ದ ಪಿಐಎಲ್‌ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ವಿಚಾರ ತಿಳಿಸಿತು.

Bar & Bench

ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳೆಂದು (ಎಸ್‌ಟಿ) ಗುರುತಿಸಲಾದ ಸಮುದಾಯಗಳಿಗೆ ಪ್ರಮಾಣಾನುಗುಣ ಪ್ರಾತಿನಿಧ್ಯ ನೀಡುವುದಕ್ಕಾಗಿ ಕ್ಷೇತ್ರ ಪುನರ್‌ವಿಂಗಡಣಾ ಆಯೋಗ ಮರುರಚಿಸುವುದನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. 

ಮುಖ್ಯ ಚುನಾವಣಾ ಆಯುಕ್ತರೊಂದಿಗೆ ಚರ್ಚಿಸಿ ನವೆಂಬರ್ 23ರರೊಳಗೆ (ಗುರುವಾರ) ಕಾರ್ಯಸಾಧ್ಯ ಪರಿಹಾರ ಒದಗಿಸುವಂತೆ ಅದು ಕೇಂದ್ರಕ್ಕೆ ಸೂಚಿಸಿದೆ.

2008 ರಿಂದ ಯಾವುದೇ ಕ್ಷೇತ್ರ ಪುನರ್‌ವಿಂಗಡಣಾ ಪ್ರಕ್ರಿಯೆ ನಡೆಸಲಾಗಿಲ್ಲ ಎಂದು ಗಮನಿಸಿದ ನ್ಯಾಯಾಲಯ, "ಇದು ಕೇಂದ್ರ ಪರಿಗಣಿಸಬೇಕಾದ ಗಂಭೀರ ಹಾಗೂ ಸಮಗ್ರವಾದ ವಿಷಯವಾಗಿದೆ " ಎಂದಿತು.

ಕಾನೂನನ್ನು ಜಾರಿಗೆ ತರುವಂತೆ ಸಂಸತ್ತಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ತನಗೆ ತಿಳಿದಿದ್ದು "ಎಸ್‌ಸಿ, ಎಸ್‌ಟಿ ಎಂದು ಗುರುತಿಸಲಾದ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ‌ ಕ್ಷೇತ್ರ ಪುನರ್‌ವಿಂಗಡಣಾ ಆಯೋಗವನ್ನು ಮರು ರಚಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು" ಎಂದು ನ್ಯಾಯಾಲಯ ಸಲಹೆ ನೀಡಿತು.

ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ವಿಧಾನಸಭೆಗಳಲ್ಲಿ ಪರಿಶಿಷ್ಟ ಪಂಗಡಗಳಿಗೆ ಪ್ರಮಾಣಾನುಗುಣ ಪ್ರಾತಿನಿಧ್ಯ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ವಿಚಾರ ತಿಳಿಸಿತು.

ಬರುವ 2026ರಲ್ಲಿ ನಡೆಸಲು ಉದ್ದೇಶಿಸಿರುವ ಜನಗಣತಿಯವರೆಗೆ ಕ್ಷೇತ್ರ ಪುನರ್‌ವಿಂಗಡಣಾ ಆಯೋಗ ರಚಿಸಲು ಸಾಧ್ಯವಿಲ್ಲ ಎಂಬ ಕೇಂದ್ರದ ವಾದವನ್ನು ಒಪ್ಪದ ನ್ಯಾಯಾಲಯ, ಸಿಕ್ಕಿಂಗೆ ಸಂಬಂಧಿಸಿದಂತೆ ಈ ವಿಷಯದಲ್ಲಿ 371 (ಎಫ್) ವಿಧಿಯ ಮಾರ್ಗವಿದೆ ಎಂದು ಹೇಳಿದೆ. ಈ ಅನುಚ್ಛೇದ ಸಿಕ್ಕಿಂಗೆ ಸಂಬಂಧಿಸಿದಂತೆ ವಿಶೇಷ ಕಾನೂನು ನಿಬಂಧನೆಗಳನ್ನು ಒದಗಿಸುತ್ತದೆ. 

ಪರಿಶಿಷ್ಟ ಪಂಗಡಗಳೆಂದು ಗುರುತಿಸಿಕೊಂಡಿರುವ ಲಿಂಬು ಮತ್ತು ತಮಾಂಗ್ ಸಮುದಾಯಗಳ ಪ್ರಮಾಣಾನುಗುಣ ಪ್ರಾತಿನಿಧ್ಯದ ಬೇಡಿಕೆಗೆ ಸಾಂವಿಧಾನಿಕ ಆಧಾರವಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಗೃಹ ಸಚಿವಾಲಯ 2018ರಲ್ಲಿ ಸಿಕ್ಕಿಂ ವಿಧಾನಸಭೆಯಲ್ಲಿ ಸ್ಥಾನಗಳನ್ನು 32 ರಿಂದ 40 ಕ್ಕೆ ಹೆಚ್ಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತಾದರೂ, ಅಂದಿನಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಸಂವಿಧಾನದ 327ನೇ ವಿಧಿಯು ಕ್ಷೇತ್ರ ಪುನರ್‌ವಿಂಗಡಣೆ ಸೇರಿದಂತೆ ಚುನಾವಣೆಗಳಿಗೆ ಸಂಬಂಧಿಸಿದ ಕಾಯಿದೆಗಳನ್ನು ರೂಪಿಸಲು ಸಂಸತ್ತಿಗೆ ಅಧಿಕಾರ ನೀಡುತ್ತದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಆದರೆ 325ನೇ ವಿಧಿಯ ಬಗ್ಗೆ ಮಾತನಾಡಿದ ನ್ಯಾಯಾಲಯ, ಚುನಾವಣೆಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ (ಇಸಿ) ವಿಶಾಲ ಅಧಿಕಾರವಿದೆ ಎಂದಿತು.

ಸ್ಥಾನಗಳ ಮರು ಹೊಂದಾಣಿಕೆಗೆ ಸಂಬಂಧಿಸಿದಂತೆ ತನಗೆ ಅಧಿಕಾರವಿಲ್ಲ, ಇದಕ್ಕಾಗಿ ಪ್ರಜಾ ಪ್ರಾತಿನಿಧ್ಯ ಕಾಯಿದೆಗೆ ತಿದ್ದುಪಡಿ ಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು. 

ಲಿಂಬು ಮತ್ತು ತಮಾಂಗ್ ಬುಡಕಟ್ಟು ಜನಾಂಗದ ಪ್ರಮಾಣಾನುಗುಣ ಪ್ರಾತಿನಿಧ್ಯ ಗುರುತಿಸುವಲ್ಲಿ ವಿಫಲವಾಗಿರುವುದು ಒಂದು ಲೋಪವಾಗಿದ್ದು, ಅದನ್ನು ಚುನಾವಣಾ ಆಯೋಗವು ಸರಿಪಡಿಸಬಹುದು ಎನ್ನುವುದು ಅರ್ಜಿದಾರರ ವಾದವಾಗಿತ್ತು. ಆದರೆ, ನ್ಯಾಯಾಲಯ ಈ ವಾದವನ್ನು ಒಪ್ಪಲಿಲ್ಲ. ಗುರುವಾರ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.