ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿಯನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್ ನಿರ್ಧರಿಸಿದರೂ ಅದು ಕೇವಲ ಅಕೆಡೆಮಿಕ್ ಹಾಗೂ ತಾತ್ವಿಕ ಪ್ರಯತ್ನವಷ್ಟೇ ಆಗಬಹುದಾಗಿದ್ದು, ಪ್ರಾಯೋಗಿಕ ದೃಷ್ಟಿಯಿಂದ ನೋಡಿದಾಗ ಕಷ್ಟಸಾಧ್ಯವೆನಿಸುತ್ತದೆ ಎಂದು ಹಿರಿಯ ನ್ಯಾಯವಾದಿ ಅರವಿಂದ್ ದಾತಾರ್ ಅಭಿಪ್ರಾಯಪಟ್ಟರು.
ಕಾರ್ಯಾಂಗ ಜಾರಿಗೆ ತಂದಿರುವ ಸಂಸತ್ತಿನ ನಿರ್ಧಾರವನ್ನು ರದ್ದುಗೊಳಿಸುವುದು ಕಾಲ ಕಳೆದಂತೆ ಕಷ್ಟಕರವಾಗಲಿದೆ ಎಂದು ಅವರು ಹೇಳಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ಕಾರ್ಯಕ್ಷೇತ್ರವಾಗಿರಿಸಿಕೊಂಡಿರುವ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿಯ ಉಚಿತ ಡಿಜಿಟಲ್ ಪುಸ್ತಕ ಪ್ರಕಾಶನ ಅಂಗವಾಗಿರುವ ನವಿ ಬುಕ್ಸ್ ಹೊರ ತಂದಿರುವ ʼಹಮೀನ್ ಅಸ್ಟ್? ಎ ಬಯೋಗ್ರಫಿ ಆಫ್ ಆರ್ಟಿಕಲ್ 370’ ಕೃತಿ ಬಿಡುಗಡೆ ಸಮಾರಂಭದ ಸಂವಾದ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಅವರು ಮಾತನಾಡಿದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ಸೇರಿದಂತೆ ಕಾನೂನು ಕ್ಷೇತ್ರದ ಹಲವು ಪ್ರಮುಖರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ಆಗಸ್ಟ್ 2019ರಲ್ಲಿ ರದ್ದುಗೊಳಿಸಲಾಗಿದ್ದು ಇದನ್ನು ಅನೇಕರು ಅಸಾಂವಿಧಾನಿಕ ಎಂದಿದ್ದರು. ರದ್ದತಿಯ ನಂತರ ಕೇಂದ್ರ ಸರ್ಕಾರವು ಜಮ್ಮು- ಕಾಶ್ಮೀರ ರಾಜ್ಯವನ್ನು ಜಮ್ಮು - ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪುನಾರಚಿಸಿತು. 370ನೇ ವಿಧಿ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದರೂ ನ್ಯಾಯಾಲಯ ಇನ್ನೂ ಅವುಗಳ ವಿಚಾರಣೆ ನಡೆಸಿಲ್ಲ.
ದಾತಾರ್ ಅಭಿಪ್ರಾಯದ ಕೆಲ ಪ್ರಮುಖಾಂಶಗಳು
ಅರ್ಜಿ ಸಲ್ಲಿಕೆಯಿಂದ ಹಿಡಿದು ಅವುಗಳ ಅಂತಿಮ ವಿಲೇವಾರಿಯವರೆಗೆ ಎಷ್ಟು ಸಮಯ ಹಿಡಿದಿದೆ ಎಂಬುದನ್ನು 370ನೇ ವಿಧಿ ರದ್ದತಿ ಹಿಂಪಡೆಯುವ ಕುರಿತಾದ ತೀರ್ಪು ಅವಲಂಬಿಸಿರುತ್ತದೆ.
ಮನವಿ ಸಲ್ಲಿಸುವಲ್ಲಿ ಮತ್ತು ಅಂತಿಮ ವಿಲೇವಾರಿಯಲ್ಲಿ ಸಾಕಷ್ಟು ವಿಳಂಬವಾಗಿದ್ದರೆ ವಿಧಿಯನ್ನು ಮೊದಲಿದ್ದಂತೆ ಜಾರಿಗೆ ತರುವುದು ಕಷ್ಟಕರವಾಗುತ್ತದೆ. ತಾಂತ್ರಿಕವಾಗಿ ಇದನ್ನು ಮಾಡಬಹುದಾದರೂ ಪ್ರಾಯೋಗಿಕವಾಗಿ ಎಲ್ಲಿಯವರೆಗೆ ಹೀಗೆ ಮಾಡಬಹುದು ಎಂಬುದು ಪ್ರಶ್ನೆಯಾಗಿದೆ. ಮತ್ತು ಇದು 370ನೇ ವಿಧಿಯ ಸಂದರ್ಭದಲ್ಲಿ ಮಾತ್ರವಲ್ಲದೆ ಇತರ ಸೂಕ್ಷ್ಮ ಪ್ರಕರಣಗಳಲ್ಲೂ ಮತ್ತೆ ಮತ್ತೆ ಬರಲಿದೆ. ಹಾಗಾಗಿ ವಿಧಿಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವುದು ಸಾಕಷ್ಟು ಕಷ್ಟಕರವಾಗುತ್ತದೆ.
370ನೇ ವಿಧಿ ರದ್ದತಿಗೆ ಸಂಬಂಧಿಸಿದಂತೆ ಇರುವ ಸವಾಲು ನಿಜವಾಗಿಯೂ ಸತ್ವಯುತವಾದದ್ದು ಎಂದು ನನಗೆ ಅನ್ನಿಸುವುದಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳ ಪ್ರಕಾರ ಈಗ ನಡೆದಿರುವುದು ತೀರಾ ತಪ್ಪಲ್ಲ. ಆದ್ದರಿಂದ ಅಂತಹ ಅರ್ಜಿಗಳನ್ನು ಬದಿಗೆ ಸರಿಸುವ ಸಾಧ್ಯತೆ ಇದೆ. ಎರಡೂ ಕಡೆಯವರಲ್ಲಿ ಗಟ್ಟಿಯಾದ ನಿಲುವು ಇರಬಹುದು.
ಆದರೆ 1959ರಿಂದ 2019ರವರೆಗಿನ ತೀರ್ಪುಗಳನ್ನು ಗಮನಿಸಿದಾಗ ಸಾಮಾನ್ಯವಾಗಿ ಸಂಸತ್ತು ಮಾಡಿರುವುದನ್ನು ಪ್ರಶ್ನಿಸಲಾಗಲಿ ಅಥವಾ ರದ್ದುಪಡಿಸಲಾಗಲಿ ಹೆಚ್ಚಿನ ಆಸ್ಪದವಿಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗಾಗಿ ಈ ಹಿಂಪಡೆಯುವುದು ಎನ್ನುವ ಸಿದ್ಧಾಂತವೇನಿದೆ ಇದು ಹೆಚ್ಚು ತಾತ್ವಿಕವಾದುದೇ ಹೊರತು ಪ್ರಾಯೋಗಿಕವಲ್ಲ ಎನ್ನುವುದು ನನ್ನ ಈಗಿನ ಆಲೋಚನೆ.