Supreme Court  
ಸುದ್ದಿಗಳು

ನ್ಯಾಯಾಂಗ ಸೇವೆಗೆ ಅರ್ಹತೆ ಪಡೆಯಲು ಮೂರು ವರ್ಷಗಳ ವಕೀಲಿಕೆ ಕಡ್ಡಾಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸಿಜೆಐ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಎ ಜಿ ಮಸೀಹ್ ಹಾಗೂ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ಇಂದು ಬೆಳಿಗ್ಗೆ ತೀರ್ಪು ಪ್ರಕಟಿಸಿತು.

Bar & Bench

ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅಭ್ಯರ್ಥಿಯಾಗಲು 3 ವರ್ಷ ವಕೀಲಿಕೆ ಮಾಡಿರುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

ಸಿಜೆಐ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಎ ಜಿ ಮಸೀಹ್ ಹಾಗೂ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ಇಂದು ಬೆಳಿಗ್ಗೆ ತೀರ್ಪು ಪ್ರಕಟಿಸಿತು.

ಈ ಸಂಬಂಧ ಎಲ್ಲಾ ರಾಜ್ಯ ಸರ್ಕಾರಗಳು ನಿಯಮಗಳಿಗೆ ತಿದ್ದುಪಡಿ ಮಾಡಬೇಕು. ನ್ಯಾಯಧೀಶರಾಗುವ ಅಭ್ಯರ್ಥಿ ಒಂದು ವರ್ಷ ಕಾಲ ಕಾನೂನು ಗುಮಾಸ್ತರಾಗಿಯೂ ಸೇವೆ ಸಲ್ಲಿಸಿರಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಆದರೆ ಇದು ಈಗಾಗಲೇ ನಡೆಯುತ್ತಿರುವ ನ್ಯಾಯಾಂಗ ನೇಮಕಾತಿಗೆ ಇದು ಅನ್ವಯಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದ್ದು ಭವಿಷ್ಯದ ನೇಮಕಾತಿಗೆ ಮಾತ್ರ ಅನ್ವಯವಾಗುತ್ತದೆ ಎಂದಿದೆ.

ಕಾನೂನು ಪದವೀಧರರನ್ನು ನೇರವಾಗಿ ನ್ಯಾಯಾಧೀಶರನ್ನಾಗಿ ನೇಮಕ ಮಾಡುತ್ತಿರುವುದರಿಂದ ಬಹಳಷ್ಟು ಸಮಸ್ಯೆಗಳಾಗಿವೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ನ್ಯಾಯಾಂಗ ಅಧಿಕಾರಿಗಳಿಗೆ ವಹಿಸಲಾಗಿರುವ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು ಅನನುಭವಿ ಕಾನೂನು ಪದವೀಧರರು ಸಮರ್ಪಕವಾಗಿ ಸಜ್ಜಾಗಿಲ್ಲದಿರಬಹುದು ಎಂದು ವಿವರಿಸಿತು.

ಕಾನೂನು ಪದವೀಧರರಿಗೆ ಪುಸ್ತಕದ ಜ್ಞಾನದಿಂದಷ್ಟೇ ಸ್ಪಂದಿಸಲು ಆಗುವುದಿಲ್ಲ. ಪ್ರಾಕ್ಟೀಸ್‌ ಸಮಯದಲ್ಲಿ ಅವರು ಹಿರಿಯ ವಕೀಲರಿಗೆ ಸಹಾಯ ಮಾಡುವ ಮೂಲಕ, ನ್ಯಾಯಾಲಯವನ್ನು ಅರ್ಥಮಾಡಿಕೊಳ್ಳುವ ಮೂಲಕ ಸ್ಪಂದಿಸಬಹುದು. ಹೀಗಾಗಿ ನೇಮಕಾತಿಗೂ ಮುನ್ನ ಕೆಲ ಸೇವೆಗಳಲ್ಲಿ ಅವರು ತೊಡಗಿರುವಂತೆ (ವಕೀಲರಾಗಿ ಸೇವೆ ಸಲ್ಲಿಸಿರುವುದು) ಮಾಡುವುದು ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ಮೂರು ವರ್ಷಗಳ ಕಾನೂನು ಪ್ರಾಕ್ಟೀಸನ್ನು ಕಾನೂನು ಪದವೀಧರರು ತಾತ್ಕಾಲಿಕ ದಾಖಲಾತಿಯ ಆಧಾರದ ಮೇಲೆ ಪ್ರಾಕ್ಟೀಸ್‌ ಆರಂಭಿಸಿದ ದಿನದಿಂದ ಗಣನೆಗೆ ತೆಗೆದುಕೊಳ್ಳಬಹುದೇ ವಿನಾ ನ್ಯಾಯವಾದಿಗಳು, ಅಖಿಲ ಭಾರತ ವಕೀಲರ ಪರೀಕ್ಷೆಯಲ್ಲಿ (ಎಐಬಿಇ) ಉತ್ತೀರ್ಣರಾದ ದಿನಾಂಕದಿಂದಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಅಭ್ಯರ್ಥಿ ಮೂರು ವರ್ಷಗಳ ಕಾನೂನು ಪ್ರಾಕ್ಟೀಸ್‌ ಮಾಡಿದ್ದಾನೆಯೇ ಎಂಬುದನ್ನು ಹತ್ತು ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ ವಕೀಲರಿಂದ ಪ್ರಮಾಣೀಕರಿಸಬೇಕು ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಧೀಶರಾಗ ಬಯಸುವ ಅಭ್ಯರ್ಥಿಯ ಕಾನೂನು ಗುಮಾಸ್ತಿಕೆ  ಅನುಭವವನ್ನು ಪ್ರಾಕ್ಟೀಸ್‌ ಎಂತಲೂ ಪರಿಗಣಿಸಬಹುದು ಎಂದು ಕೂಡ ಅದು ತಿಳಿಸಿದೆ. 

ಮಧ್ಯಪ್ರದೇಶ ಹೈಕೋರ್ಟ್ 2002ರಲ್ಲಿ ತನ್ನ ನ್ಯಾಯಾಂಗ ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡಿತ್ತು. ಆ ಮೂಲಕ  ಸಿವಿಲ್ ನ್ಯಾಯಾಧೀಶರಿಗೆ ಮೂರು ವರ್ಷಗಳ ಕಾನೂನು ಪ್ರಾಕ್ಟೀಸ್‌ ಕಡ್ಡಾಯ ಎಂದಿತ್ತು. ಇದನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು.