ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ನಿಧಿ ಒದಗಿಸುವುದಕ್ಕೆ ಸಮ್ಮತಿಸುವ ಚುನಾವಣಾ ಬಾಂಡ್ ಯೋಜನೆ ಪ್ರಶ್ನಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಚುನಾವಣಾ ಬಾಂಡ್ ಯೋಜನೆಗೆ ಸಂಬಂಧಿಸಿದ ಇತ್ತೀಚಿನ ಅಧಿಸೂಚನೆ ಪ್ರಶ್ನಿಸಿ ಹಿರಿಯ ನ್ಯಾಯವಾದಿ ಅನೂಪ್ ಚೌಧರಿ ಹೊಸ ಮನವಿ ಸಲ್ಲಿಸಿದ ಬಳಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ಮನವಿಯನ್ನು ವಿಚಾರಣೆಗೆ ಪಟ್ಟಿ ಮಾಡುವುದಾಗಿ ಹೇಳಿದರು.
ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗ ಸಭೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯುವ ವರ್ಷದಲ್ಲಿ ಚುನಾವಣಾ ಬಾಂಡ್‌ಗಳ ಮಾರಾಟಕ್ಕೆ 15 ದಿನಗಳ ಹೆಚ್ಚುವರಿ ಅವಧಿ ಒದಗಿಸುವುದಕ್ಕಾಗಿ ಹೊಸ ಅಧಿಸೂಚನೆಯು ಯೋಜನೆಗೆ ತಿದ್ದುಪಡಿ ತಂದಿದೆ.
ಅವರು ಯೋಜನೆಗೆ ವಿರುದ್ಧವಾಗಿ ಅಧಿಸೂಚನೆ ಹೊರಡಿಸಿದ್ದು ಈ ಅಧಿಸೂಚನೆ ಸಂಪೂರ್ಣ ಕಾನೂನು ಬಾಹಿರವಾಗಿದೆ ಎಂದು ಚೌಧರಿ ಅವರು ಹೇಳಿದರು. ಆಗ ಸಿಜೆಐ ಚಂದ್ರಚೂಡ್ ಅವರು ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಚುನಾವಣಾ ಬಾಂಡ್ ಎಂಬುದು ಪ್ರಾಮಿಸರಿ ನೋಟಿನ ರೂಪದಲ್ಲಿದ್ದು, ಅದನ್ನು ಭಾರತೀಯತೆಯನ್ನು ಹೊಂದಿರುವ ಯಾವುದೇ ವ್ಯಕ್ತಿ, ಕಂಪೆನಿ, ಸಂಸ್ಥೆ ಅಥವಾ ಸಂಘಟನೆಯ ಖರೀದಿಸಬಹುದಾಗಿದೆ. . ಚುನಾವಣಾ ಬಾಂಡ್ ವಿವಿಧ ಮೌಲ್ಯಗಳಲ್ಲಿ ಲಭ್ಯವಿದ್ದು, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ನಿರ್ದಿಷ್ಟ ಉದ್ದೇಶಕ್ಕಾಗಿ ಅವುಗಳನ್ನು ನೀಡಲಾಗುತ್ತದೆ.