same sex marriage judgment 
ಸುದ್ದಿಗಳು

ಸಲಿಂಗ ವಿವಾಹ ಅಥವಾ ಸಿವಿಲ್ ಯೂನಿಯನ್‌ಗೆ ಸುಪ್ರೀಂ ನಕಾರ; ಅಲ್ಪಮತದ ತೀರ್ಪಿನಲ್ಲಿ ಸಿವಿಲ್‌ ಯೂನಿಯನ್‌ಗೆ ಸಿಜೆಐ ಸಹಮತ

ಅಸ್ತಿತ್ವದಲ್ಲಿರುವ ಕಾನೂನಿನಡಿ ಮದುವೆಯಾಗುವ ಹಕ್ಕು ಇಲ್ಲದಿದ್ದರೂ ಸಲಿಂಗ ಮನೋಧರ್ದಮದ ಜೋಡಿ ಸಿವಿಲ್ ಯೂನಿಯನ್ ಹಕ್ಕು ಹೊಂದಿದ್ದಾರೆ ಎಂದು ನ್ಯಾಯಾಲಯ ತನ್ನ ಅಲ್ಪಮತದ ತೀರ್ಪಿನಲ್ಲಿ ತಿಳಿಸಿತು.

Bar & Bench

ಸಲಿಂಗ ಜೋಡಿಯು ವಿವಾಹವಾಗುವ ಅಥವಾ ಸಿವಿಲ್‌ ಯೂನಿಯನ್‌ (ವಿವಾಹಕ್ಕೆ ಸರಿಸಮನಾದ ಕಾನೂನು ಮಾನ್ಯತೆ ಇರುವ ಸಂಬಂಧ) ಹೊಂದುವ ಕಾನೂನಾತ್ಮಕ ಹಕ್ಕಿನ ಕೋರಿಕೆಗೆ ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ  [ಸುಪ್ರಿಯೋ ಅಲಿಯಾಸ್‌ ಸುಪ್ರಿಯಾ ಚಕ್ರವರ್ತಿ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ].

ಈಗಿರುವ ಕಾನೂನು ಸಲಿಂಗ ಜೋಡಿ ವಿವಾಹವಾಗುವುದಕ್ಕೆ ಅಥವಾ ಸಿವಿಲ್‌ ಯೂನಿಯನ್‌ ಮದುವೆಗೆ ಸಮ್ಮತಿ ಸೂಚಿಸುವುದಿಲ್ಲ. ಹಾಗೆ ಸಮ್ಮತಿ ನೀಡುವ ಕಾನೂನು ರೂಪಿಸುವುದು ಸಂಸತ್ತಿಗೆ ಬಿಟ್ಟ ವಿಚಾರ ಎಂದು ನ್ಯಾಯಾಲಯ ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್,  ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠ ತೀರ್ಪು ನೀಡಿದೆ. ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ಪೀಠ ನೀಡಿದೆ.

ನ್ಯಾ. ಭಟ್, ಕೊಹ್ಲಿ ಹಾಗೂ ನರಸಿಂಹ ಅವರು ಬಹುಮತದ ತೀರ್ಪು ನೀಡಿದರೆ, ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಕೌಲ್ ಅಲ್ಪಮತದ ತೀರ್ಪಿತ್ತರು.

ನ್ಯಾಯಮೂರ್ತಿ ಭಟ್ ಅವರು ನೀಡಿದ ಬಹುಮತದ ತೀರ್ಪು ಈ ಕೆಳಗಿನ ಅಂಶಗಳನ್ನು ಹೇಳುತ್ತದೆ:

  • ಮದುವೆ ಪ್ರಶ್ನಾತೀತ ಹಕ್ಕು ಅಲ್ಲ.

  • ಜಾರಿಗೊಳಿಸಿದ ಕಾನೂನಿನ ಮೂಲಕ ಮಾತ್ರವೇ ಸಿವಿಲ್‌ ಯೂನಿಯನ್‌ಗೆ ಮಾನ್ಯತೆ ನೀಡಬಹುದಾಗಿದ್ದು ಅಂತಹ ನಿಯಂತ್ರಕ ಚೌಕಟ್ಟಿನ ರಚನೆಯನ್ನು ನ್ಯಾಯಾಲಯಗಳು ಆದೇಶಿಸುವುದಿಲ್ಲ.

  • ಸಲಿಂಗ ಮನೋಧರ್ಮದ ವ್ಯಕ್ತಿಗಳು ಪರಸ್ಪರ ಪ್ರೀತಿಸುವುದನ್ನು  ನಿಷೇಧಿಸಲಾಗಿಲ್ಲ, ಆದರೆ ಅಂತಹ ಕೂಟಕ್ಕೆ ಮಾನ್ಯತೆ ಪಡೆಯುವ ಹಕ್ಕು ಅವರಿಗಿಲ್ಲ.

  •  ಸಲಿಂಗ ಮನೋಧರ್ಮದ ವ್ಯಕ್ತಿಗಳು ತಮ್ಮಿಷ್ಟದ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ಹೊಂದಿದ್ದು ಅಂತಹ ಹಕ್ಕುಗಳನ್ನು ಅನುಭವಿಸುವುದಕ್ಕಾಗಿ ಅವರಿಗೆ ರಕ್ಷಣೆ ನೀಡಬೇಕು.

  • ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ಸಲಿಂಗ ಜೋಡಿಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಹಕ್ಕಿಲ್ಲ.

  • ಸಲಿಂಗ ವಿವಾಹಕ್ಕೆ ಸಂಬಂಧಿಸಿದ ಎಲ್ಲಾ ಸಂಬಂಧಿತ ಅಂಶಗಳ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಉನ್ನತಾಧಿಕಾರದ ಸಮಿತಿ ರಚಿಸಬೇಕು.

  • ತೃತೀಯಲಿಂಗಿ ವ್ಯಕ್ತಿಗಳಿಗೆ ಮದುವೆಯಾಗುವ ಹಕ್ಕಿದೆ.

ಅಸ್ತಿತ್ವದಲ್ಲಿರುವ ಕಾನೂನು ಸಲಿಂಗ ಜೋಡಿ ವಿವಾಹವಾಗುವುದಕ್ಕೆ ಅಥವಾ ಸಿವಿಲ್‌ ಯೂನಿಯನ್‌ ಮದುವೆಗೆ ಸಮ್ಮತಿ ಸೂಚಿಸುವುದಿಲ್ಲ. ಹಾಗೆ ಸಮ್ಮತಿ ನೀಡುವ ಕಾನೂನು ರೂಪಿಸುವುದು ಸಂಸತ್ತಿಗೆ ಬಿಟ್ಟ ವಿಚಾರ ಎಂದು ನ್ಯಾಯಾಲಯ ತನ್ನ ಅಲ್ಪಮತದ ತೀರ್ಪಿನಲ್ಲಿ ತಿಳಿಸಿದೆ.

ಸಿಜೆಐ ಚಂದ್ರಚೂಡ್‌ ಅವರು ನೀಡಿರುವ ಅಲ್ಪಮತದ ತೀರ್ಪಿನ ಪ್ರಮುಖ ಅಂಶಗಳು ಹೀಗಿವೆ:

  •  ಸಲಿಂಗ ಮನೋಧರ್ಮ ಎಂಬುದು ನಗರವಾಸಿಗಳು ಅಥವಾ ಗಣ್ಯರಿಗೆ ಸೀಮಿತವಲ್ಲ.

  •  ಮದುವೆಯ ಸಾರ್ವತ್ರಿಕ ಪರಿಕಲ್ಪನೆ ಎಂಬುದಿಲ್ಲ. ಕಟ್ಟುಪಾಡುಗಳ ಕಾರಣದಿಂದಾಗಿ ಮದುವೆಯು ಕಾನೂನಾತ್ಮಕ ಸಂಸ್ಥೆ ಎಂಬ ಸ್ಥಾನಮಾನ ಪಡೆದುಕೊಂಡಿದೆ.

  • ಮದುವೆಯಾಗುವುದು ಮೂಲಭೂತ ಹಕ್ಕು ಎಂದು ಸಂವಿಧಾನ ಹೇಳುವುದಿಲ್ಲ ಮತ್ತು ಮದುವೆ ಎಂಬ ಸಂಸ್ಥೆಯನ್ನು ಮೂಲಭೂತ ಹಕ್ಕಿನ ಸ್ಥಾನಮಾನಕ್ಕೆ ಏರಿಸಲು ಸಾಧ್ಯವಿಲ್ಲ.

  • ವಿಶೇಷ ವಿವಾಹ ಕಾಯಿದೆಯ ನಿಬಂಧನೆಗಳನ್ನು ನ್ಯಾಯಾಲಯ ರದ್ದುಗೊಳಿಸುವಂತಿಲ್ಲ. ಸಲಿಂಗ ವಿವಾಹದ ಕಾನೂನು ಮಾನ್ಯತೆಯನ್ನು ಸಂಸತ್ತು ನಿರ್ಧರಿಸಬೇಕು. ನ್ಯಾಯಾಲಯಗಳು ನೀತಿ ನಿರೂಪಣೆ ವಿಷಯಗಳಿಂದ ದೂರ ಇರಬೇಕಿದೆ.

  • ಮಿಲನಕ್ಕೆ ಸಲಿಂಗ ಮನೋಧರ್ಮದ ಸಮುದಾಯಗಳಿಗೆ ಸಂವಿಧಾನದ ಅಡಿಯಲ್ಲಿ ಸ್ವಾತಂತ್ರ್ಯ ನೀಡಲಾಗಿದೆ. ಅವರ ಹಕ್ಕುಗಳ ನಿರಾಕರಣೆ ಮೂಲಭೂತ ಹಕ್ಕುಗಳ ನಿರಾಕರಣೆಯಾಗುತ್ತದೆ. ಮಿಲನದ ಹಕ್ಕು ಲೈಂಗಿಕ ದೃಷ್ಟಿಕೋನವನ್ನು ಆಧರಿಸಿರುವುದಿಲ್ಲ.

  • ತೃತೀಯಲಿಂಗಿ ವ್ಯಕ್ತಿಗಳಿಗೆ ಅಸ್ತಿತ್ವದಲ್ಲಿರುವ ಕಾನೂನಿನ ಪ್ರಕಾರ ಮದುವೆಯಾಗುವ ಹಕ್ಕಿದೆ.

  • ಒಟ್ಟಾಗಿ ಮಗುವನ್ನು ದತ್ತು ಪಡೆಯುವ ಹಕ್ಕು ಸಲಿಂಗ ಮನೋಧರ್ಮದ ಜೋಡಿಗೆ ಇದೆ. ಕೇಂದ್ರ ದತ್ತಕ ಸಂಪನ್ಮೂಲ ಪ್ರಾಧಿಕಾರ (ಸಿಎಆರ್‌ಎ- ಕಾರಾ) ರೂಪಿಸಿರುವ ದತ್ತಕ ನಿಯಮಾವಳಿಯ 5(3)ನೇ ನಿಯಮ ಸಲಿಂಗ ಮನೋಧರ್ಮದ ವ್ಯಕ್ತಿಗಳಿಗೆ ತಾರತಮ್ಯ ಎಸಗುವುದರಿಂದ ಸಂವಿಧಾನದ 15ನೇ ವಿಧಿಯನ್ನು ಉಲ್ಲಂಘಿಸುತ್ತದೆ.

  • ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸವಲತ್ತುಗಳನ್ನು ಪಡೆಯುವ ಸಲುವಾಗಿ ಸಲಿಂಗ ಮನೋಧರ್ಮದವರ ಕೂಟ/ಮಿಲನಕ್ಕೆ ಸರ್ಕಾರಗಳು ನಿಷೇಧ ಹೇರುವಂತಿಲ್ಲ.