ಪಟಾಕಿ ಸಂಪೂರ್ಣ ನಿಷೇಧಿಸುವ ಆದೇಶ ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ ಮಾತ್ರವೇ ಏಕೆ ಅನ್ವಯಿಸಬೇಕು ಇಡೀ ದೇಶಕ್ಕೆ ಏಕೆ ವಿಸ್ತರಿಸಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಳಿದೆ [ಎಂಸಿ ಮೆಹ್ತಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ದೆಹಲಿಯಲ್ಲಿ ಇರುವವರಂತೆಯೇ ದೇಶದ ಎಲ್ಲಾ ಜನರೂ ಶುದ್ಧ ಗಾಳಿ ಪಡೆಯಲು ಅರ್ಹರಾಗಿದ್ದು ಮಾಲಿನ್ಯ ರಹಿತ ಗಾಳಿ ಎಂಬುದನ್ನು ರಾಜಧಾನಿ ಪ್ರದೇಶಕ್ಕಷ್ಟೇ ಮಿತಿಗೊಂಡ ಸವಲತ್ತು ಎಂದು ಪರಿಗಣಿಸಲಾಗದು ಎಂಬುದಾಗಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ಒತ್ತಿ ಹೇಳಿದೆ.
ಬೇರೆ ನಗರಗಳ ಜನರೂ ಇದೇ ರೀತಿಯ ಆರೋಗ್ಯ ಅಪಾಯ ಎದುರಿಸುತ್ತಿರುವಾಗ ದೆಹಲಿ ಮತ್ತಿತರ ಪ್ರದೇಶಗಳ ಜನರಷ್ಟೇ ಏಕೆ ಶುದ್ಧ ಗಾಳಿ ಪಡೆಯಬೇಕು ಎಂದು ಅದು ಪ್ರಶ್ನಿಸಿತು.
"ರಾಷ್ಟ್ರ ರಾಜಧಾನಿ ಪ್ರದೇಶದ ನಾಗರಿಕರು ಮಾಲಿನ್ಯ ಮುಕ್ತ ಗಾಳಿಯನ್ನು ಪಡೆಯಲು ಅರ್ಹರಾಗಿದ್ದರೆ, ಇತರ ನಗರಗಳ ಜನರು ಏಕೆ ಅರ್ಹರಲ್ಲ? ಇದು ರಾಜಧಾನಿ ಅಥವಾ ಸುಪ್ರೀಂ ಕೋರ್ಟ್ ಈ ಪ್ರದೇಶದಲ್ಲಿದೆ ಎಂಬ ಕಾರಣಕ್ಕೆ, ಅವರು ಮಾತ್ರ ಮಾಲಿನ್ಯ ಮುಕ್ತ ಗಾಳಿ ಸೇವಿಸಬೇಕು ಎಂದರ್ಥವಲ್ಲ. ನಾನು ಕಳೆದ ಚಳಿಗಾಲ ಅಮೃತಸರದಲ್ಲಿದ್ದೆ. ಅಲ್ಲಿ ಮಾಲಿನ್ಯ ದೆಹಲಿಗಿಂತ ಕೆಟ್ಟದಾಗಿತ್ತು. ಎಂಥದ್ದೇ ನೀತಿ ಜಾರಿಗೆ ಬಂದರೂ ಅದು ಇಡೀ ದೇಶಕ್ಕೆ ಅನ್ವಯವಾಗಬೇಕು. ದೆಹಲಿಯಲ್ಲಿರುವವರು ದೇಶದ ಗಣ್ಯರು ಎಂಬ ಕಾರಣಕ್ಕೆ ದೆಹಲಿಯನ್ನಷ್ಟೇ ವಿಶೇಷವಾಗಿ ಕಾಣಲಾಗದು. ಪಟಾಕಿ ನಿಷೇಧವಾಗುವುದಾದರೆ ದೇಶದೆಲ್ಲೆಡೆ ನಿಷೇಧಗೊಳ್ಳಲಿ” ಎಂದು ಅವರು ಹೇಳಿದರು.
ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಟಾಕಿ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ವರ್ಷಪೂರ್ತಿ ನಿಷೇಧಿಸುವುದರ ವಿರುದ್ಧ ಪಟಾಕಿ ವ್ಯಾಪಾರಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಪಟಾಕಿ ನಿಷೇಧವಾಗುವುದಾದರೆ, ದೇಶದಾದ್ಯಂತ ನಿಷೇಧವಾಗಲಿ.ಸುಪ್ರೀಂ ಕೋರ್ಟ್
ವಿವಿಧ ವಕೀಲರು ಮಂಡಿಸಿದ ವಾದಗಳನ್ನು ಆಲಿಸಿದ ಪೀಠ ಅಸ್ತಿತ್ವದಲ್ಲಿರುವ ಪರವಾನಗಿಗಳಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತು ಮತ್ತು ವಾಯು ಗುಣಮಟ್ಟ ನಿರ್ವಹಣಾ ಆಯೋಗದಿಂದ (ಸಿಎಕ್ಯೂಎಂ) ವರದಿ ಪಡೆಯುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 22ರಂದು ನಡೆಯಲಿದೆ.
ಪಟಾಕಿ ವ್ಯಾಪಾರಿಗಳ ಒಕ್ಕೂಟದ ಪರವಾಗಿ ಹಿರಿಯ ವಕೀಲ ಡಿ ಎಸ್ ನಾಯ್ಡು, ಹಿರಿಯ ವಕೀಲ ಕೆ ಪರಮೇಶ್ವರ್, ಪ್ರಕರಣದ ಅಮಿಕಸ್ ಕ್ಯೂರಿ ಹಿರಿಯ ವಕೀಲೆ ಅಪರಾಜಿತಾ ಸಿಂಗ್, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ವಾದ ಮಂಡಿಸಿದರು.