SEDITION
SEDITION 
ಸುದ್ದಿಗಳು

ದೇಶದ್ರೋಹ: ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಈ ಕಾನೂನು ಬೇಕೆ? ಅಟಾರ್ನಿ ಜನರಲ್‌ಗೆ ಸುಪ್ರೀಂ ಪ್ರಶ್ನೆ

Bar & Bench

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 124ಎ ಅಡಿಯ ದೇಶದ್ರೋಹ ನಿಬಂಧನೆ ಇಂದಿಗೂ ಅಗತ್ಯವಿದೆಯೇ ಎಂದು ಗುರುವಾರ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ಅರ್ಜಿದಾರ ಎಸ್‌ ಜಿ ಒಂಬತ್ತುಕೆರೆ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ಹೃಷಿಕೇಶ್‌ ರಾಯ್‌ ನೇತೃತ್ವದ ತ್ರಿಸದಸ್ಯ ಪೀಠವು ನೋಟಿಸ್‌ ಜಾರಿ ಮಾಡಿದ್ದು ಇದರ ಜೊತೆಗೆ, ಭಾರತೀಯ ಸಂಪಾದಕರ ಕೂಟ (ಇಂಡಿಯನ್‌ ಎಡಿಟರ್ಸ್‌ ಗಿಲ್ಡ್‌) ಸಲ್ಲಿಸಿದ್ದ ಬಾಕಿ ಇರುವ ಮನವಿಯನ್ನು ವಿಚಾರಣೆಗೆ ನಿಗದಿಪಡಿಸಿದೆ.

“ವಿವಾದ ಎಂದರೆ, ಇದು ವಸಾಹತುಶಾಹಿ ಕಾಲದ ಕಾನೂನಾಗಿದ್ದು ಬ್ರಿಟಿಷರು ಸ್ವಾತಂತ್ರ್ಯದ ದಮನಕ್ಕಾಗಿ ಮತ್ತು ಮಹಾತ್ಮ ಗಾಂಧಿ, ಬಾಲಗಂಗಾಧರ್‌ ತಿಲಕ್‌ ಅವರ ವಿರುದ್ಧ ಇದನ್ನು ಬಳಸಿದರು. ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರವೂ ಈ ಕಾನೂನು ಇನ್ನೂ ಅಗತ್ಯವಿದೆಯೇ?" ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರನ್ನು ಪ್ರಶ್ನಿಸಿದರು.

ದೇಶದ್ರೋಹ ನಿಬಂಧನೆಯನ್ನು ಪ್ರಶ್ನಿಸಿರುವ ಇಂಥದ್ದೇ ಮನವಿಯು ಸುಪ್ರೀಂ ಕೋರ್ಟ್‌ನ ಮತ್ತೊಂದು ಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ ಎಂದು ಅಟಾರ್ನಿ ಜನರಲ್‌ ವೇಣುಗೋಪಾಲ್‌ ಮಾಹಿತಿ ನೀಡಿದರು.

ಭಾರತೀಯ ಸಂಪಾದಕರ ಕೂಟವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಶ್ಯಾಮ್‌ ದಿವಾನ್‌ ಅವರು “ಇದು ಅದೇ ವಿಚಾರವಾಗಿದ್ದು, ಶಾಸನಬದ್ಧ ನಿಬಂಧನೆಯನ್ನು ಪ್ರಶ್ನಿಸಲಾಗಿದೆ. ನಾವು ಕೆಲವು ಮಾರ್ಗಸೂಚಿಗಳಿಗೆ ಬೇಡಿಕೆ ಇಟ್ಟಿದ್ದೇವೆ. ಸೆಕ್ಷನ್‌ 124ಎ ಅಸಾಂವಿಧಾನಿಕ ಮಾತ್ರವಲ್ಲದೇ ಅದನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ನಾವು ವಾದಿಸಿದ್ದೇವೆ” ಎಂದರು.

“ಈ ಸೆಕ್ಷನ್‌ನಡಿ ದಾಖಲಿಸಿರುವ ದೂರುಗಳ ಇತಿಹಾಸ ಗಮನಿಸಿದರೆ ತಪ್ಪಿತಸ್ಥರ ಪ್ರಮಾಣ ಅತ್ಯಂತ ಕಡಿಮೆ ಇದೆ. (ಕಾಯಿದೆಯನ್ನು) ದುರ್ಬಳಕೆ ಮಾಡಿಕೊಂಡಿರುವ ಆತಂಕಕಾರಿ ಸಂಖ್ಯೆಯನ್ನು ಮರ ಕತ್ತರಿಸಲು ಗರಗಸ ಹಿಡಿದು ಹೊರಟ ಬಡಗಿ... ಇಡೀ ಕಾಡನ್ನೇ ಕತ್ತರಿಸಿದ್ದಕ್ಕೆ ಹೋಲಿಸಬಹುದು" ಎಂದು ಎಜಿ ಅವರಿಗೆ ಸಿಜೆಐ ರಮಣ ತಿಳಿಸಿದರು.

ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 66 ಎ ಅನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದರೂ ದೇಶದೆಲ್ಲೆಡೆ ಸಾವಿರಾರು ಪ್ರಕರಣಗಳನ್ನು ದಾಖಲಿಸುತ್ತಿರುವುದನ್ನು ಸಿಜೆಐ ಇದೇ ವೇಳೆ ಉದಾಹರಿಸಿದರು. “ಕಾನೂನಿನ ದುರ್ಬಳಕೆ ಮತ್ತು ಕಾರ್ಯಾಂಗದ ಉತ್ತರದಾಯಿತ್ವ ಇಲ್ಲದಿರುವ ಬಗ್ಗೆ ನಮಗೆ ಕಳವಳ ಇದೆ. ಉಲ್ಲೇಖಿಸಲಾಗಿರುವ ಇತರೆ ಪ್ರಕರಣಗಳ ಕಡೆಗೂ ದೃಷ್ಟಿ ಇಡಲಿದ್ದೇವೆ… ಬಾಕಿ ಇರುವ ಎಲ್ಲಾ ಪ್ರಕರಣಗಳನ್ನೂ ಪರಿಶೀಲಿಸಲಿದ್ದು, ಬಹುಶಃ ಎಲ್ಲಾ ಪ್ರಕರಣಗಳನ್ನು ಒಂದೇ ಕಡೆ ಇಟ್ಟು ವಿಚಾರಣೆ ನಡೆಸಬಹುದು” ಎಂದರು.

ಹಲವು ಹಳೆಯ ಕಾನೂನುಗಳನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರವು ಈ ನಿಬಂಧನೆಯತ್ತ ಏಕೆ ದೃಷ್ಟಿ ಹರಿಸಿಲ್ಲ ಎಂದು ನ್ಯಾಯಾಲಯ ಆಶ್ಚರ್ಯ ವ್ಯಕ್ತಪಡಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಎಜಿ ವೇಣುಗೋಪಾಲ್‌ “ಐಪಿಸಿ ಸೆಕ್ಷನ್‌ 124ಎ ಅನ್ನು ರದ್ದುಪಡಿಸುವ ಅಗತ್ಯವಿಲ್ಲ. ಬದಲಿಗೆ ಮಾರ್ಗಸೂಚಿ ರೂಪಿಸಬೇಕು. ಹಾಗೆ ಮಾಡಿದರೆ ಐಪಿಸಿ ಸೆಕ್ಷನ್‌ 124ಎ ಕಾನೂನಿನ ಉದ್ದೇಶ ಪೂರೈಕೆ ಆದಂತಾಗುತ್ತದೆ” ಎಂದರು.

ಇದಕ್ಕೆ ನ್ಯಾಯಾಲಯವು “ಕೆಲವು ಪಕ್ಷಕಾರರು ಇತರೆ ಪಕ್ಷಕಾರರ ಧ್ವನಿ ಆಲಿಸಲು ಬಯಸದಿದ್ದರೆ ಇಂತಹ ಕಾನೂನುಗಳ ಮೂಲಕ ಇತರರನ್ನು ಅದರಲ್ಲಿ ಸಿಲುಕಿಸುತ್ತಾರೆ. ವ್ಯಕ್ತಿಗಳಿಗೆ ಇದು ಗಂಭೀರ ಪ್ರಶ್ನೆಯಾಗಿದೆ” ಎಂದಿತು.

“ತಮ್ಮ ಸೇವೆಯ ಮೂಲಕ ಅರ್ಜಿದಾರರು ದೇಶಕ್ಕಾಗಿ ತಮ್ಮ ಇಡೀ ಜೀವನವನ್ನು ಅರ್ಪಿಸಿದ್ದಾರೆ. ಇದು ಕುಮ್ಮಕ್ಕಿನ ಮನವಿ ಎಂದು ನಾವು ಹೇಳಲಾಗದು” ಎಂಬುದಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಿತು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡಿದ ಅದು ಭಾರತೀಯ ಸಂಪಾದಕರ ಕೂಟದ ಮನವಿಯನ್ನು ಅದರ ಜೊತೆ ಸೇರಿಸಿದೆ.

ದೇಶದ್ರೋಹ ಕಾನೂನಿನ ಸಿಂಧುತ್ವ ಪ್ರಶ್ನಿಸಿರುವ ಮತ್ತೊಂದು ಮನವಿಯನ್ನು ನ್ಯಾಯಮೂರ್ತಿ ಯು ಯು ಲಲಿತ್‌ ನೇತೃತ್ವದ ಪೀಠ ಈಗಾಗಲೇ ವಿಚಾರಣೆಗೆ ಎತ್ತಿಕೊಂಡಿದೆ.