Lawyers, Supreme Court 
ಸುದ್ದಿಗಳು

ಪೋಶ್ ಕಾಯಿದೆ ವ್ಯಾಪ್ತಿಗೆ ವಕೀಲರನ್ನು ತರಲು ಕೋರಿಕೆ: ಬಿಸಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಉದ್ಯೋಗದಾತ ಮತ್ತು ಉದ್ಯೋಗಿ ಸಂಬಂಧ ಇದ್ದಲ್ಲಿ ಮಾತ್ರ ಕಾಯಿದೆ ಅನ್ವಯಿಸಲಿದೆ. ವಕೀಲರಾಗಿ ಕೆಲಸ ಮಾಡುವವರಿಗೆ ಇದು ಅನ್ವಯಿಸದು ಎಂದು ಬಾಂಬೆ ಹೈಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಪಿಐಎಲ್ ಪ್ರಶ್ನಿಸಿದೆ.

Bar & Bench

ಲೈಂಗಿಕ ಕಿರುಕುಳದಿಂದ ಮಹಿಳೆಯರ ರಕ್ಷಣೆ ಕಾಯಿದೆಯನ್ನು (ಪೋಶ್‌ ಕಾಯಿದೆ) ವೃತ್ತಿ ನಿರತ ವಕೀಲರಿಗೂ ಅನ್ವಯಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಮತ್ತು ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೋರಿದೆ [ಸೀಮಾ ಜೋಶಿ ಮತ್ತು ಭಾರತೀಯ ವಕೀಲರ ಪರಿಷತ್‌ ಇನ್ನಿತರರ ನಡುವಣ ಪ್ರಕರಣ].

ವಕೀಲರ ಪರಿಷತ್‌ ಮಟ್ಟದಲ್ಲಿ ಪೋಶ್‌ ಕಾಯಿದೆಯಡಿ ಶಾಶ್ವತ ಆಂತರಿಕ ದೂರು ಸಮಿತಿ (ಐಸಿಸಿಗಳು) ರಚಿಸುವಂತೆ ಆದೇಶ ನೀಡಲು ಬಾಂಬೆ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿತ್ತು. ಈ ವೇಳೆ, ಉದ್ಯೋಗದಾತ ಮತ್ತು ಉದ್ಯೋಗಿ ಸಂಬಂಧ ಇದ್ದಲ್ಲಿ ಮಾತ್ರ ಕಾಯಿದೆ ಅನ್ವಯಿಸಲಿದೆ. ವಕೀಲರಾಗಿ ಕೆಲಸ ಮಾಡುವವರಿಗೆ ಇದು ಅನ್ವಯಿಸದು ಎಂದು ಅದು ಹೇಳಿದ್ದನ್ನು ವಕೀಲೆ ಸೀಮಾ ಜೋಶಿ  ಅವರು ಸಲ್ಲಿಸಿರುವ ಅರ್ಜಿ ಪ್ರಶ್ನಿಸಿದೆ.

ಲೈಂಗಿಕ ಕಿರುಕುಳ ವಿರೋಧಿ ಕಾನೂನಿನ ವ್ಯಾಪ್ತಿಯಿಂದ ಕಾನೂನು ವೃತ್ತಿಯನ್ನಷ್ಟೇ ಹೊರಗಿಡುವುದು ಸಮರ್ಥನೀಯ ಅಲ್ಲ. ಹೈಕೋರ್ಟ್‌ ವ್ಯಾಖ್ಯಾನದಿಂದಾಗಿ ವಕೀಲೆಯರಿಗೆ ಯಾವುದೇ ರಕ್ಷಣೆ ದೊರೆಯದಂತಾಗುತ್ತದೆ. ಇದು ವಿಶಾಖಾ ಪ್ರಕರಣ ಹಾಗೂ ಮೇಧಾ ಕೊತ್ವಾಲ್‌ ಲೆಲೆ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿಗೆ ವಿರುದ್ಧ ಎಂದು ಅವರು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠಕ್ಕೆ ವಿವರಿಸಿದ್ದಾರೆ.

ಪೋಶ್ ಕಾಯಿದೆಯ ಸದುಪಯೋಗ ವಕೀಲೆಯರಿಗೂ ದೊರೆಯುವಂತಾಗಬೇಕು. ಬಾಂಬೆ ಹೈಕೋರ್ಟ್ ತೀರ್ಪು ರದ್ದಾಗಬೇಕು. ಎಲ್ಲಾ ವಕೀಲರ ಪರಿಷತ್ತುಗಳು ಮತ್ತು ವಕೀಲರ ಸಂಘಗಗಳಲ್ಲಿ ಆಂತರಿಕ ದೂರು ಸಮಿತಿ ಸ್ಥಾಪಿಸಲು ಸೂಚನೆ ನೀಡಬೇಕು. ಹಾಗೂ ಕಾನೂನು ವೃತ್ತಿಯಲ್ಲಿ ಲೈಂಗಿಕ ಕಿರುಕುಳ ತಡೆಗೆ ವಿಶೇಷ ಮಾರ್ಗಸೂಚಿ ಜಾರಿಗೆ ತರಬೇಕು ಎಂದು ಅವರು ಕೋರಿದ್ದಾರೆ.

ಹೈಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಅರ್ಜಿಯನ್ನು ಸಲ್ಲಿಸದೆ ಸಂವಿಧಾನದ 32ನೇ ವಿಧಿಯಡಿ ಪಿಐಎಲ್‌ ರೂಪದಲ್ಲಿ ಸಲ್ಲಿಸಿರುವುದು ಏಕೆ ಎಂದು ಪೀಠವು ಅರ್ಜಿದಾರರನ್ನು ಪ್ರಶ್ನಿಸಿತು. ಅರ್ಜಿದಾರರು ತಾವು ಪ್ರಕರಣದಲ್ಲಿ ತಡೆಯಾಜ್ಞೆ ಕೋರುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಬಿಸಿಐ ಹಾಗೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿತು.

ಇದೇ ವೇಳೆ ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಪರಿಷತ್ತುಗಳನ್ನು ಪ್ರತಿವಾದಿಗಳ ಪಟ್ಟಿಯಿಂದ ಅದು ಕೈಬಿಟ್ಟಿತು. ಅರ್ಜಿದಾರರ ಪರವಾಗಿ ವಕೀಲರಾದ ರಿತಿಕಾ ವೊಹ್ರಾ, ಅಂಬರ್ ಟಿಕೂ ಮತ್ತು ನಮನ್ ಜೋಶಿ ಸುಪ್ರೀಂ ಕೋರ್ಟ್‌ಗೆ ಹಾಜರಾದರು.