Supreme Court, Bihar map  
ಸುದ್ದಿಗಳು

ಮೀಸಲಾತಿ ಕಾನೂನು ರದ್ದು: ಆರ್‌ಜೆಡಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಬಿಹಾರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ. 65ಕ್ಕೆ ಹೆಚ್ಚಿಸಿ, ಸಾಮಾನ್ಯ ವರ್ಗದ ಮೀಸಲಾತಿಯನ್ನು ಶೇ. 35ಕ್ಕೆ ಮಿತಿಗೊಳಿಸಲಾಗಿತ್ತು. ಈ ನಿರ್ಧಾರವನ್ನು ಜೂನ್‌ನಲ್ಲಿ ಬಿಹಾರ ಹೈಕೋರ್ಟ್‌ ವಜಾ ಮಾಡಿತ್ತು.

Bar & Bench

ಹಿಂದುಳಿದ ವರ್ಗಗಳು, ಅತಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಿಸಿ ಜಾರಿಗೊಳಿಸಿದ್ದ ಕಾನೂನನ್ನು ರದ್ದುಪಡಿಸಿ ಪಟ್ನಾ ಹೈಕೋರ್ಟ್‌ ಮಾಡಿದ್ದ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಬಿಹಾರ ಸರ್ಕಾರಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಆರ್‌ಜೆಡಿ ಅರ್ಜಿ ಮತ್ತು ಬಿಹಾರ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಒಟ್ಟುಗೂಡಿಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರ ತ್ರಿಸದಸ್ಯ ಪೀಠವು ಬಿಹಾರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತು.

ಪಟ್ನಾ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ಜುಲೈನಲ್ಲಿ ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು. ಈಗ ಪಟ್ನಾ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ಆರ್‌ಜೆಡಿಯು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರಲಿಲ್ಲ. ಆರ್‌ಜೆಡಿ ಪರವಾಗಿ ಹಿರಿಯ ವಕೀಲ ಪಿ ವಿಲ್ಸನ್‌ ವಾದಿಸಿದರು.

ಕೋಟಾ ನಿಗದಿಪಡಿಸುವ ಮೀಸಲಾತಿ ಮಸೂದೆಯು ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರಜೆಗಳ ಸಮಾನ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಸುಪ್ರೀಂ ಕೋರ್ಟ್‌ ಮೀಸಲಾತಿ ವಿಚಾರದಲ್ಲಿ ನಿಗದಿಪಡಿಸಿರುವ ಶೇ.50 ಮಿತಿಯನ್ನು ವಿಶೇಷ ಸಂದರ್ಭದಲ್ಲಿ ಅದರಲ್ಲೂ ಸೌಲಭ್ಯರಹಿತ ಪ್ರದೇಶಗಳಿಗೆ ಮಾತ್ರ ಅನ್ವಯಿಸಬಹುದು ಎಂದಿತ್ತು.