ಸುದ್ದಿಗಳು

ಸುಗ್ರೀವಾಜ್ಞೆ, ಸಲಹೆಗಾರರ ವಜಾ ಪ್ರಶ್ನಿಸಿ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿ: ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಸುಗ್ರೀವಾಜ್ಞೆಗೆ ತಡೆ ನೀಡಬೇಕು ಹಾಗೂ ಸರ್ಕಾರ ನೇಮಿಸಿದ್ದ 437 ಸಲಹೆಗಾರರನ್ನು ವಜಾಗೊಳಿಸಿದ್ದ ಲೆ. ಗವರ್ನರ್ ನಿರ್ಧಾರಕ್ಕೆ ತಡೆ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಜುಲೈ 17ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ ನ್ಯಾಯಾಲಯ.

Bar & Bench

ದೆಹಲಿಯಲ್ಲಿ ನಾಗರಿಕ ಸೇವಾ ಅಧಿಕಾರಿಗಳ ವರ್ಗಾವಣೆ ಮತ್ತು ನಿಯುಕ್ತಿಗೆ ಸಂಬಂಧಿಸಿದಂತೆ ಲೆ. ಗವರ್ನರ್‌ ಅವರಿಗೆ ಹೆಚ್ಚಿನ ಅಧಿಕಾರ ನೀಡುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕೇಂದ್ರದ ಪ್ರತಿಕ್ರಿಯೆ ಕೇಳಿದೆ. [ದೆಹಲಿ ಸರ್ಕಾರ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ದೆಹಲಿಯ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ), ವಿನಯ್ ಕುಮಾರ್ ಸಕ್ಸೇನಾ ಅವರನ್ನು ಕೂಡ ಪ್ರಕರಣದ ಪ್ರತಿವಾದಿಯನ್ನಾಗಿ ಸೇರಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರಿದ್ದ ಪೀಠ ತಿಳಿಸಿದೆ.

ತಾನು ನೀಡುತ್ತಿರುವ ನೋಟಿಸ್‌ಗೆ ಎರಡು ವಾರಗಳೊಳಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಅದು ಸೂಚಿಸಿದೆ. ಸುಗ್ರೀವಾಜ್ಞೆಗೆ ತಡೆ ನೀಬೇಕು ಹಾಗೂ ಸರ್ಕಾರ ನೇಮಿಸಿದ್ದ 437 ಸಲಹೆಗಾರರನ್ನು ವಜಾಗೊಳಿಸಿದ್ದ ಲೆ. ಗವರ್ನರ್‌ ನಿರ್ಧಾರಕ್ಕೆ ತಡೆ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಜುಲೈ 17ರಂದು ವಿಚಾರಣೆ ನಡೆಸುವುದಾಗಿ ಅದು ಇದೇ ವೇಳೆ ಹೇಳಿದೆ.  

ಕೇಂದ್ರದ ಸುಗ್ರೀವಾಜ್ಞೆ, ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಗರಿಕ ಸೇವಾ ಅಧಿಕಾರಿಗಳ ಮೇಲಿನ ನಿಯಂತ್ರಣವನ್ನು ಚುನಾಯಿತ ಸರ್ಕಾರದಿಂದ ಕಸಿದುಕೊಂಡು ಚುನಾಯಿತರಾಗದೇ ಅಧಿಕಾರ ನಿರ್ವಹಿಸುವ ಲೆ. ಗವರ್ನರ್‌ ಅವರಿಗೆ ನೀಡುತ್ತದೆ ಎಂದು ಆಮ್‌ ಆದ್ಮಿ ಪಕ್ಷ ಸರ್ವೋಚ್ಚ ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿತ್ತು.