ವಿಧಾನ ಮಂಡಲದಲ್ಲಿ ಒಪ್ಪಿಗೆ ಪಡೆದಿರುವ 12 ಮಸೂದೆಗಳಿಗೆ ಸಹಿ ಹಾಕಲು ನಿರಾಕರಿಸಿರುವ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರ ನಡೆಗೆ ಶುಕ್ರವಾರ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರಿ ಅಧಿಕಾರಿಗಳ ಪ್ರಾಸಿಕ್ಯೂಷನ್ ಮತ್ತು ಕೈದಿಗಳ ಅವಧಿ ಪೂರ್ವ ಬಿಡುಗಡೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿತು.
ತಮಿಳುನಾಡು ಸರ್ಕಾರ ಎತ್ತಿರುವ ವಿಚಾರವು ಗಂಭೀರವಾಗಿದೆ ಎಂದಿರುವ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
“ಅರ್ಜಿಯಲ್ಲಿ ಎತ್ತಿರುವ ವಿಚಾರಗಳು ಗಂಭೀರವಾಗಿದ್ದು, ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರಿಗೆ ಸಲ್ಲಿಸಲಾಗಿರುವ ಒಟ್ಟಾರೆ 12 ಮಸೂದೆಗಳಿಗೆ ಸಂಬಂಧಿಸಿದಂತೆ ಯಾವುದೇ ಕ್ರಮವಾಗಿಲ್ಲ. ಸರ್ಕಾರಿ ಅಧಿಕಾರಿಗಳ ವಿಚಾರಣೆಗೆ ಒಪ್ಪಿಗೆ, ಕೈದಿಗಳ ಅವಧಿಪೂರ್ವ ಬಿಡುಗಡೆ, ಲೋಕಾಸೇವಾ ಆಯೋಗಕ್ಕೆ ನೇಮಕ ಪ್ರಸ್ತಾವಗಳು ಸಹ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಈ ವಿಚಾರದ ಭಾಗವಾಗಿ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರು ನ್ಯಾಯಾಲಯಕ್ಕೆ ಸಹಕರಿಸಬೇಕು ಎಂದು ಪೀಠ ಹೇಳಿದೆ.