"ಋತುಚಕ್ರ ಅವಮಾನ"ದಂತಹ ಘಟನೆಗಳ ವಿರುದ್ಧ ಕೆಲಸದ ಸ್ಥಳಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಗೌಪ್ಯತೆ ಮತ್ತು ಘನತೆಯನ್ನು ರಕ್ಷಿಸಲು ರಾಷ್ಟ್ರವ್ಯಾಪಿ ಮಾರ್ಗಸೂಚಿಗಳನ್ನು ಕೋರಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿದೆ.
ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ ಮಹಿಳಾ ನೈರ್ಮಲ್ಯ ಕಾರ್ಮಿಕರು ರಜೆಗಾಗಿ ಅರ್ಜಿ ಸಲ್ಲಿಸಿದಾಗ ಅವರು ಮುಟ್ಟಾಗಿದ್ದಾರೆ ಎಂದು ಸಾಬೀತುಪಡಿಸಲು ಅವರ ಸ್ಯಾನಿಟರಿ ಪ್ಯಾಡ್‌ಗಳ ಛಾಯಾಚಿತ್ರಗಳನ್ನು ಕಳುಹಿಸಲು ಕೇಳಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸಲ್ಲಿಸಲಾದ ಅರ್ಜಿಯ ಕುರಿತು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಆರ್ ಮಹಾದೇವನ್ ಅವರ ಪೀಠವು ಕೇಂದ್ರ ಸರ್ಕಾರ ಮತ್ತು ಹರಿಯಾಣ ರಾಜ್ಯಕ್ಕೆ ನೋಟಿಸ್ ನೀಡಿದೆ.
ಎಸ್‌ಸಿಬಿಎ ಪರವಾಗಿ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್, ಈ ವಿಷಯವು ತುಂಬಾ ಕಳವಳಕಾರಿಯಾಗಿದೆ ಮತ್ತು ತುರ್ತು ನ್ಯಾಯಾಂಗ ಹಸ್ತಕ್ಷೇಪದ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇಂತಹ ಘಟನೆಗಳು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಘನತೆ, ಗೌಪ್ಯತೆ ಮತ್ತು ದೈಹಿಕ ಸ್ವಾಯತ್ತತೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಅವರು ಹೇಳಿದರು. "ಇದು ಘೋರ ಕ್ರಿಮಿನಲ್ ಪ್ರಕರಣವಾಗಿದ್ದು, ಗಮನ ಹರಿಸಬೇಕಾದ ವಿಷಯವಾಗಿದೆ" ಎಂದು ಸಿಂಗ್ ವಾದಿಸಿದರು.
ಈ ವೇಳೆ ಹರಿಯಾಣ ಪರವಾಗಿ ಹಾಜರಾದ ವಕೀಲರು ಈ ವಿಷಯವನ್ನು ವಿಶ್ವವಿದ್ಯಾಲಯದ ಆಂತರಿಕ ದೂರು ಸಮಿತಿ (ಐಸಿಸಿ)ಗೆ ಸೂಚಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಸಮಿತಿ ತನ್ನ ವರದಿಯನ್ನು ಅಂತಿಮಗೊಳಿಸಿದೆ. ವಿಚಾರಣೆಯ ನಂತರ, ಒಬ್ಬ ಸಹಾಯಕ ರಿಜಿಸ್ಟ್ರಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಇಬ್ಬರು ಗುತ್ತಿಗೆ ಕಾರ್ಮಿಕರ ವಿರುದ್ಧ ಸಂಸ್ಥೆಯ ಮುಖೇನವೇ ಮುಂದಿನ ಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ರಾಜ್ಯದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. "ಇಂತಹ ಘಟನೆಗಳನ್ನು ಖಂಡಿತವಾಗಿಯೂ ಸಹಿಸಲಾಗುವುದಿಲ್ಲ" ಎಂದು ರಾಜ್ಯದ ವಕೀಲರು ಹೇಳಿದರು.
ಈ ವೇಳೆ ಪೀಠವು ಪ್ರಕರಣವು ವಿಸ್ತೃತವಾದ ಸಾಮಾಜಿಕ ಸಮಸ್ಯೆಯನ್ನು ಬಿಂಬಿಸುತ್ತದೆ. ಮುಟ್ಟಿನ ವಿರುದ್ಧದ ಆಳವಾದ ಪಕ್ಷಪಾತಿ ಧೋರಣೆಗಳು ಇನ್ನೂ ಸಮಾಜದ ವರ್ತನೆಯನ್ನು ರೂಪಿಸುತ್ತಿರುವುದನ್ನು ಪ್ರತಿಬಿಂಬಿಸುತ್ತದೆ ಎಂದಿತು. "ಇದು ಸಮಾಜದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ" ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.
ಕರ್ನಾಟಕದಂತಹ ಕೆಲವು ರಾಜ್ಯಗಳು ಮುಟ್ಟಿನ ರಜೆಯಂತಹ ಪ್ರಗತಿಪರ ಕ್ರಮಗಳನ್ನು ಪರಿಚಯಿಸಿದ್ದರೂ, ಅಂತಹ ನಿದರ್ಶನಗಳು ಸಾಮಾಜಿಕ ವರ್ತನೆಗಳು ಇನ್ನೂ ಎಷ್ಟು ವಿಕಸನಗೊಳ್ಳಬೇಕು ಎಂಬುದನ್ನು ತೋರಿಸುತ್ತವೆ ಎಂದು ನ್ಯಾ. ನಾಗರತ್ನ ಅವರು ಟೀಕಿಸಿದರು.
"ಕರ್ನಾಟಕದಲ್ಲಿ, ಅವರು ಮುಟ್ಟಿನ ರಜೆ ನೀಡುತ್ತಿದ್ದಾರೆ. ಇದನ್ನು ಓದಿದ ನಂತರ, ರಜೆ ನೀಡಲು ಅಂತಹ ಮಂದಿ (ಕೆಟ್ಟ ಮನಸ್ಥಿತಿ ಇರುವವರು) ಈಗ ಪುರಾವೆ ಕೇಳುತ್ತಾರೆಯೇ ಎಂದು ನಾನು ಯೋಚಿಸಿದೆ?" ಎಂದು ಅವರು ಹೇಳಿದರು.
ಎಲ್ಲಾ ಸಾಂಸ್ಥಿಕ ವ್ಯವಸ್ಥೆಗಳಲ್ಲಿ ಮುಟ್ಟಿನ ಮಹಿಳೆಯರ ಘನತೆಯನ್ನು ಕಾಪಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸೂಚಿಸಲಾದ ಮಾರ್ಗಸೂಚಿಗಳ ಕರಡನ್ನು ಸಿದ್ಧಪಡಿಸುವುದಾಗಿ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು.
ಅಂತಿಮವಾಗಿ ನ್ಯಾಯಾಲಯವು ವಿಚಾರಣೆಯನ್ನು ಡಿ.15ಕ್ಕೆ ಮುಂದೂಡಿತು.