Supreme Court 
ಸುದ್ದಿಗಳು

ವಿಚಾರಣೆ ವಿಳಂಬ ಹಿನ್ನೆಲೆ: ದೇಶದ ಎಲ್ಲಾ ಆಸಿಡ್ ದಾಳಿ ಪ್ರಕರಣಗಳ ವಿವರ ಕೇಳಿದ ಸುಪ್ರೀಂ ಕೋರ್ಟ್

ಆಸಿಡ್ ದಾಳಿಯ ಸಂತ್ರಸ್ತರಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಲ್ಲಿ ಬಾಕಿ ಇರುವ ವಿಚಾರಣೆಗಳ ವಿವರ ಸಲ್ಲಿಸುವಂತೆ ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

Bar & Bench

ಸಂತ್ರಸ್ತೆಯೊಬ್ಬರ ಮೇಲೆ ಆಸಿಡ್‌ ದಾಳಿ ನಡೆದು ಹದಿನಾರು ವರ್ಷಗಳೇ ಕಳೆದಿದ್ದರೂ ದೆಹಲಿಯ ವಿಚಾರಣಾ ನ್ಯಾಯಾಲಯದಲ್ಲಿ ಆ ಕುರಿತಾದ  ಪ್ರಕರಣ ಇನ್ನೂ ಬಾಕಿ ಇರುವ ಬಗ್ಗೆ ಸುಪ್ರೀಂ ಕೋರ್ಟ್‌ ಗುರುವಾರ ತೀವ್ರ ಆಘಾತ ವ್ಯಕ್ತಪಡಿಸಿದೆ [ಶಾಹೀನ್ ಮಲಿಕ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ]

"2009ರಲ್ಲಿ ನನ್ನ ಕಕ್ಷಿದಾರರ ಮೇಲೆ  ಆಸಿಡ್‌ ದಾಳಿ ನಡೆದಿತ್ತು. ಆದರೆ ಈಗ ನನ್ನ ಕಕ್ಷಿದಾರರು ಹಾಗೆ ದಾಳಿಗೆ ತುತ್ತಾದ ಇತರರಿಗಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವರಿಗೆ ಆಸಿಡ್ ಕುಡಿಯುವಂತೆ ಬಲವಂತ ಮಾಡಲಾಗಿತ್ತು. ಅವರು ಈಗಲೂ ನೋವು ಅನುಭವಿಸುತ್ತಿದ್ದು ಕೊಳವೆ ಮೂಲಕ ಅವರಿಗೆ ಆಹಾರ ಪೂರೈಸಲಾಗುತ್ತಿದೆ" ಎಂದು ಆಸಿಡ್ ದಾಳಿಗೊಳಗಾದ ಸಂತ್ರಸ್ತೆಯ ಪರ ವಕೀಲರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ  ಪೀಠಕ್ಕೆ ತಿಳಿಸಿದರು.

ಆಗ ಸಿಜೆಐ ಸೂರ್ಯಕಾಂತ್‌ ದಾಳಿ ಮಾಡಿದ್ದ ವ್ಯಕ್ತಿ ವಿರುದ್ಧದ ವಿಚಾರಣೆ ಇನ್ನೂ ಬಾಕಿ ಇದೆಯೇ ಎಂದು ಕೇಳಿದರು. ಅದಕ್ಕೆ ಹೌದು ಎಂದು ಅರ್ಜಿದಾರರ ಪರ ವಕೀಲರು ಪ್ರತಿಕ್ರಿಯಿಸಿದರು. ಆಗ ಸಿಜೆಐ ಇಷ್ಟೊಂದು ದೀರ್ಘಕಾಲೀನ ವಿಳಂಬ ನಾಚಿಕೆಗೇಡಿನ ಸಂಗತಿ ಎಂದರು.

ದೇಶದ ರಾಜಧಾನಿ ದೆಹಲಿಯಲ್ಲಿಯೇ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದಿದ್ದರೆ, ಬೇರೆಡೆ ಹೇಗೆ?ತುಂಬಾ ನಾಚಿಕೆಗೇಡಿನ ಸಂಗತಿ! ಇದು ವ್ಯವಸ್ಥೆಯ ಅಣಕ.
ಸುಪ್ರೀಂ ಕೋರ್ಟ್‌,,

 ಆಸಿಡ್ ದಾಳಿಯ ಸಂತ್ರಸ್ತರಿಗೆ ಪೂರಕವಾಗಿ ಸರ್ಕಾರ ಯಾವುದಾದರೂ ಕ್ರಮ ತೆಗೆದುಕೊಳ್ಳಬಹುದೇ, ಸುಗ್ರೀವಾಜ್ಞೆ ಹೊರಡಿಸಲು ಸಾಧ್ಯವೇ ಎಂದು ಸಿಜೆಐ ಅವರು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಈ ಹಂತದಲ್ಲಿ ಕೇಳಿದರು. ಸರ್ಕಾರವು ಸಕಾರಾತ್ಮಕ ಕ್ರಮ ಕೈಗೊಳ್ಳುವುದು ಸೂಕ್ತವೆಂದು ತಿಳಿಸಿದರು. ʼಅಂಗವಿಕಲರʼ ವ್ಯಾಪ್ತಿಯೊಳಗೆ ಇವರನ್ನು ತರಬಹುದೇ ಎಂದು ಪರಿಶೀಲಿಸಲು ಸೂಚಿಸಿದರು.

ಇದೇ ವೇಳೆ ನ್ಯಾಯಾಲಯ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳು ದೇಶದಾದ್ಯಂತ ಬಾಕಿ ಇರುವ ಎಲ್ಲ ಆಸಿಡ್‌ ದಾಳಿ ಪ್ರಕರಣಗಳ ವಿವರ  ಸಲ್ಲಿಸಬೇಕು ಎಂದು ಹೇಳಿತು. ಮುಂದಿನ ವಾರ ಪ್ರಕರಣವನ್ನು ನ್ಯಾಯಾಲಯ ಮತ್ತೆ ಆಲಿಸಲಿದೆ.