ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕೈಗೊಳ್ಳಲಾಗುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಆಮೂಲಾಗ್ರ ಪರಿಷ್ಕರಣೆ ಪ್ರಶ್ನಿಸಿ ಸಲ್ಲಿಸಲಾದ ಆರು ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರತಿಕ್ರಿಯೆ ಕೇಳಿದೆ.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ, ಸಿಪಿಐ(ಎಂ), ಕಾಂಗ್ರೆಸ್ ಪಕ್ಷಗಳು ಸುಪ್ರೀಂ ಕೋರ್ಟ್‌ನಲ್ಲಿ ಎಸ್ಐಆರ್ ಪ್ರಶ್ನಿಸಿದ್ದರೆ, ಪಶ್ಚಿಮ ಬಂಗಾಳದಲ್ಲಿ ಈ ಪ್ರಕ್ರಿಯೆ ನಡೆಸುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕ ಆಕ್ಷೇಪಿಸಿದೆ.
ಎಲ್ಲಾ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಇಸಿಐಗೆ ನೋಟಿಸ್ ನೀಡಿತು. ಇದೇ ವೇಳೆ ಅರ್ಜಿದಾರರು ಎಸ್‌ಐಆರ್ ಬಗ್ಗೆ ಭಯ ಪಡುತ್ತಿರುವುದೇಕೆ ಎಂದು ಪ್ರಶ್ನಿಸಿತು. ಪೀಠಕ್ಕೆ ಈ ಕುರಿತು ಮನದಟ್ಟಾದರೆ ಈ ಪ್ರಕ್ರಿಯೆ ರದ್ದುಗೊಳಿಸುವುದಾಗಿ ಅದು ಅರ್ಜಿದಾರರಿಗೆ ತಿಳಿಸಿತು.
ಅರ್ಜಿದಾರರು ಯಾಕೆ ಇಷ್ಟೊಂದು ಭಯಭೀತರಾಗಿದ್ದಾರೆ?ಸುಪ್ರೀಂ ಕೋರ್ಟ್
ಡಿಎಂಕೆ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಮತದಾರರ ಪಟ್ಟಿಯ ದೊಡ್ಡಮಟ್ಟದ ಮರುಪರಿಶೀಲನೆಗೆ ಸಾಮಾನ್ಯವಾಗಿ 2-3 ವರ್ಷ ಬೇಕಾಗುತ್ತದೆ. ಆದರೆ ಚುನಾವಣಾ ಆಯೋಗ ಕೇವಲ ಒಂದು ತಿಂಗಳಲ್ಲಿ ಈ ಕಾರ್ಯ ನಡೆಸುವಂತೆ ಒತ್ತಡ ಹೇರುತ್ತಿದೆ. ಇದರಿಂದಾಗಿ ಅನೇಕ ಮತದಾರರ ಹೆಸರು ಬಿಟ್ಟುಹೋಗುವ ಅಪಾಯವಿದೆ ಎಂದರು.
ಎಸ್ಐಆರ್ ಪೂರ್ಣಗೊಳಿಸಲು ಮೂರು ವರ್ಷ ಹಿಡಿಯುತ್ತದೆ. ಆದರೆ ಒಂದು ತಿಂಗಳಿನಲ್ಲಿಯೇ ಪೂರ್ಣಗೊಳಿಸಲು ಇಸಿಐ ಹೊರಟಿದೆ.ಕಪಿಲ್ ಸಿಬಲ್
ತಮಿಳುನಾಡಿನಲ್ಲಿ ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಿಸಲಾಗಿದ್ದು ಇದರ ನಡುವೆಯೇ ಎಸ್‌ಐಆರ್ ನಡೆಸುವ ಅಗತ್ಯವಿಲ್ಲ. ಎಸ್‌ಐಆರ್ ಸಂಬಂಧ ನೀಡಲಾಗಿರುವ ಮಾರ್ಗಸೂಚಿಗಳಲ್ಲಿ ಪೌರತ್ವ ಪರಿಶೀಲನೆಯ ಅಂಶ ಸೇರಿಸಲಾಗಿದೆ. ಈ ಕಾರ್ಯ ಮಾಡಬೇಕಿರುವುದು ಕೇಂದ್ರ ಸರ್ಕಾರ, ಚುನಾವಣಾ ಆಯೋಗವಲ್ಲ ಎಂದರು.
ಡಿಎಂಕೆ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಎಸ್‌ಐಆರ್ ಪ್ರಕ್ರಿಯೆ ಕೈಗೊಳ್ಳಲು ಮುಂದಾಗಿರುವ ಸಮಯವನ್ನು ಪ್ರಶ್ನಿಸಿದರು.
"ವಿವಿಧ ರಾಜ್ಯಗಳಲ್ಲಿ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ಈ ಬಾರಿಯ ಮಳೆಗಾಲದಲ್ಲಿ ತಮಿಳುನಾಡಿನಲ್ಲಿ ಹೆಚ್ಚಿನ ಮಳೆಯಾಗಬಹುದು. ಇತರ ರಾಜ್ಯಗಳಲ್ಲಿ ಅದು ಇಲ್ಲದಿರಬಹುದು. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಯಾವಾಗಲೂ ಭಾರೀ ಮಳೆಯಾಗುತ್ತದೆ. ದೇಶಾದ್ಯಂತ ಇದು ಏಕರೂಪವಾಗಿರುವುದಿಲ್ಲ. ಬಿಎಲ್‌ಒಗಳು, ಇತರರು ಪ್ರವಾಹ ಪರಿಹಾರವನ್ನು ಸಹ ನಿರ್ವಹಿಸಬೇಕಾಗುತ್ತದೆ" ಎಂದು ತಿಳಿಸಿದರು.
ಮುಂದುವರೆದು, "ಡಿಸೆಂಬರ್ ಜನವರಿಯು ತಮಿಳುನಾಡಿನಲ್ಲೂ ಸುಗ್ಗಿಯ ಕಾಲವಾಗಿದೆ. ಸಮಯ (ಎಸ್‌ಐಆರ್‌ಗೆ) ಅನುಕೂಲಕರವಾಗಿಲ್ಲ. ಕ್ರಿಸ್‌ಮಸ್ ರಜಾದಿನಗಳನ್ನು ಸಹ ಘೋಷಿಸಲಾಗುವುದು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕನಿಷ್ಠ ಭಾಗವಹಿಸುವಿಕೆ ಇರಬಹುದು. ಇತರ ರಾಜ್ಯಗಳಲ್ಲಿ ಇದೇ ರೀತಿ ಪರಿಸ್ಥಿತಿ ಇಲ್ಲದೆ ಇರಬಹುದು" ಎಂದು ತಿಳಿಸಿದರು.
ಈ ವೇಳೆ ನ್ಯಾ. ಸೂರ್ಯಕಾಂತ್ ಅವರು "ದೇಶದಲ್ಲಿ ಮೊದಲ ಬಾರಿಗೆ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂಬಂತೆ ನೀವು ಬಿಂಬಿಸಲು ಬಯಸುತ್ತಿದ್ದೀರಿ" ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.
ಅಂತಿಮವಾಗಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಶ್ನಿಸಿ ಸಲ್ಲಿಸಲಾದ ಎಲ್ಲಾ ಹೊಸ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಇಸಿಐಗೆ ಸೂಚಿಸಿತು.