Supreme court, kerala 
ಸುದ್ದಿಗಳು

ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಮುಗಿಯುವವರೆಗೆ ಎಸ್ಐಆರ್ ಮುಂದೂಡಿಕೆ: ಅರ್ಜಿ ಕುರಿತು ಇಸಿಐಗೆ ಸುಪ್ರೀಂ ನೋಟಿಸ್

ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಜೊಯಮಲ್ಯ ಬಾಗ್ಚಿ ಮತ್ತು ಎಸ್ ವಿ ಎನ್. ಭಟ್ಟಿ ಅವರಿದ್ದ ಪೀಠ ಪ್ರಕರಣದ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿತು.

Bar & Bench

ಭಾರತೀಯ ಚುನಾವಣಾ ಆಯೋಗವು ಕೇರಳದಲ್ಲಿ ಕೈಗೊಳ್ಳಲು ಹೊರಟಿರುವ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆಯನ್ನು (ಎಸ್‌ಐಆರ್‌) ಮುಂದೂಡಬೇಕೆಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ಸಂಬಂಧ ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ನೋಟಿಸ್‌ ನೀಡಿದೆ.

ಸ್ಥಳೀಯ ಸಂಸ್ಥೆ ಚುನಾವಣೆ ಮುಗಿಯವವರಗೆ ಎಸ್‌ಐಆರ್‌ ಪ್ರಕ್ರಿಯೆ ಮುಂದೂಡಬೇಕೆಂದು ಕೇರಳ ಸರ್ಕಾರ ಕೋರಿತ್ತು. ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದ್ದು ಅದೇ ಹೊತ್ತಿಗೆ ಎಸ್‌ಐಆರ್‌ ಪ್ರಕ್ರಿಯೆ ಆರಂಭಿಸಿದರೆ ಭದ್ರತಾ ವ್ಯವಸ್ಥೆ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಅದು ಹೇಳಿದೆ. ಕೇರಳ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದರು.

ಬಳಿಕ ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಜೊಯಲಮಲ್ಯ ಬಾಗ್ಚಿ ಮತ್ತು ಎಸ್ ವಿ ಎನ್. ಭಟ್ಟಿ ಅವರಿದ್ದ ಪೀಠ ಪ್ರಕರಣದ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿತು.

ಇಡೀ ಎಸ್‌ಐಆರ್‌ ಜಾರಿಗೆ ತರುವುದನ್ನೇ ಪ್ರಶ್ನಿಸಿ ಸಿಪಿಎಂ, ಸಿಪಿಐ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಪಿ ಕೆ ಕುನ್ಹಾಲಿಕುಟ್ಟಿ ಅವರು ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆಯೂ ನ್ಯಾಯಾಲಯ ನೋಟಿಸ್‌ ನೀಡಿದೆ.

ಕೇರಳದಲ್ಲಿ ಭಾರತೀಯ ಚುನಾವಣಾ ಆಯೋಗ ಕೈಗೊಳ್ಳಲು ಹೊರಟಿರುವ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆಯನ್ನು (ಎಸ್‌ಐಆರ್‌) ಮುಂದೂಡಬೇಕೆಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ಈ ಹಿಂದೆ ತಿರಸ್ಕರಿಸಿತ್ತು. ಬದಲಿಗೆ ಬಿಹಾರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳು ಸಲ್ಲಿಸಿದ್ದ ಇದೇ ಬಗೆಯ ಅರ್ಜಿಗಳು ಈಗಾಗಲೇ ಸುಪ್ರೀಂ ಕೋರ್ಟ್‌ ಅಂಗಳದಲ್ಲಿರುವುದರಿಂದ ಕೇರಳ ಕೂಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಅದು ಸೂಚಿಸಿತ್ತು.

ಬಳಿಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಸರ್ಕಾರ ರಾಜ್ಯ ವಿಧಾನಸಭೆ ಚುನಾವಣೆ ನಡೆಯುವುದು 2026ರ ಮೇ ತಿಂಗಳಿನಲ್ಲಾದ್ದರಿಂದ ಎಸ್‌ಐಆರ್‌ ತುರ್ತಾಗಿ ನಡೆಸುವ ಅಗತ್ಯವಿಲ್ಲ. ತಾನು ಇಡೀ ಎಸ್‌ಐಆರ್‌ ಪ್ರಕ್ರಿಯೆಯನ್ನು ಪ್ರತ್ಯೇಕವಾಗಿ  ಪ್ರಶ್ನಿಸಬಹುದಾದರೂ ಈ ಅರ್ಜಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಮುಂದೂಡುವಂತೆ ಮಾತ್ರ ಕೇಳುತ್ತಿದ್ದೇನೆ ಎಂದು ಕೇರಳ ಸರ್ಕಾರ ತಿಳಿಸಿತ್ತು.   

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ 68,000 ಪೊಲೀಸ್ ಮತ್ತಿತರ ಭದ್ರತಾ ಸಿಬ್ಬಂದಿ ಜೊತೆಗೆ, ಸರ್ಕಾರಿ ಮತ್ತು ಅರೆ ಸರ್ಕಾರಿ ವಲಯದಿಂದ  1.76 ಲಕ್ಷ ಸಿಬ್ಬಂದಿ ಅಗತ್ಯವಿದೆ. ಎಸ್‌ಐಆರ್‌ ನಡೆಸಲು ಸುಮಾರು 25,668 ಹೆಚ್ಚುವರಿ ಸಿಬ್ಬಂದಿ ಅಗತ್ಯವಿದೆ. ಇದು ಆಡಳಿತ ವ್ಯವಸ್ಥೆ ಮೇಲೆ ಇಡಿಯಾಗಿ ಒತ್ತಡ ಉಂಟು ಮಾಡಿ ದಿನನಿತ್ಯದ ಆಡಳಿತ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಒಂದೇ ತರಬೇತಿ ಪಡೆದ ಸಿಬ್ಬಂದಿಯನ್ನು ಎರಡೂ ಕಾರ್ಯಗಳಿಗೆ ನಿಯೋಜಿಸಲಾಗದು ಎಂದು ಅರ್ಜಿ ಅಲಲು ತೋಡಿಕೊಂಡಿತ್ತು.