ದೇಶದ ವಿವಿಧೆಡೆ ಇರುವ ತನ್ನ 88 ಆಸ್ತಿಗಳನ್ನು ಅದಾನಿ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡುವುದಕ್ಕೆ ಅನುಮತಿ ನೀಡಬೇಕು ಹಾಗೂ ತನಿಖಾ ಪ್ರಕ್ರಿಯೆಗಳಿಂದ ರಕ್ಷಣೆ ನೀಡಬೇಕು ಎಂದು ಕೋರಿ ಸಹಾರಾ ಕಂಪೆನಿ ಸಮೂಹ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಮತ್ತು ಸಹಕಾರ ಸಚಿವಾಲಯಗಳನ್ನು ಕಕ್ಷಿದಾರರನ್ನಾಗಿ ಸೇರಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಲಹೆಯ ಮೇರೆಗೆ ಈ ಆದೇಶ ನೀಡಲಾಗಿದೆ. ಯಾವ ಆಸ್ತಿಗಳು ವ್ಯಾಜ್ಯಕ್ಕೀಡಾಗಿವೆ ಯಾವುದು ಇಲ್ಲ ಎಂಬುದನ್ನು ಕೋಷ್ಟಕ ರೂಪದಲ್ಲಿ ವಿವರಿಸುವಂತೆ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಎಂ ಎಂ ಸುಂದರೇಶ್ ಅವರಿದ್ದ ಪೀಠ ಅಮಿಕಸ್ ಕ್ಯೂರಿ ಶೇಖರ್ ನಾಫಡೆ ಅವರಿಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 17ರಂದು ನಡೆಯಲಿದೆ.
ಮಹಾರಾಷ್ಟ್ರದ ಆಂಬಿ ವ್ಯಾಲಿ ಸಿಟಿ , ಮುಂಬೈನ ಹೋಟೆಲ್ ಸಹಾರಾ ಸ್ಟಾರ್, ಲಕ್ನೋದ ಸಹಾರಾ ಶಹೆರ್ ಮತ್ತು ಸಹಾರಾ ಗಂಜ್ ಹಾಗೂ ದೇಶದ ವಿವಿಧೆಡೆ ಇರುವ 88 ಆಸ್ತಿಗಳನ್ನು ಇಡಿಯಾಗಿ ಅದಾನಿ ಕಂಪೆನಿಗೆ ಮಾರಾಟ ಮಾಡಲು ಸಹಾರಾ ಇಂಡಿಯಾ ಕಮರ್ಷಿಯಲ್ ಕಾರ್ಪೊರೇಷನ್ ಲಿಮಿಟೆಡ್ ಸೆಪ್ಟೆಂಬರ್ 6, 2025 ರ ಟರ್ಮ್ ಶೀಟ್ ಅಡಿಯಲ್ಲಿ ಅನುಮತಿ ಕೇಳಿತ್ತು.
ಅದಾನಿ ಸಂಸ್ಥೆಗೆ ಆಸ್ತಿ ಮಾರಾಟದಿಂದ ಬರುವ ಹಣವನ್ನು ಹೂಡಿಕೆದಾರರಿಗೆ ಮರುಪಾವತಿ ಮಾಡಲೆಂದು ತೆರೆಯಲಾದ ಸೆಬಿ ಸಹರಾ ಮರುಪಾವತಿ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸಹರಾ ತಿಳಿಸಿದೆ. ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ನಿರ್ದೇಶನದಂತೆ ಖಾತೆ ಸೃಜಿಸಲಾಗಿತ್ತು. ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಆಸ್ತಿಗಳನ್ನು ಮಾರಾಟ ಮಾಡಲು ಹಿಂದಿನ ಯತ್ನಗಳಲ್ಲಿ ವಿಫಲವಾಗಿದ್ದರೂ ಸಹ ತಾನು ಇದಾಗಲೇ ₹16,000 ಕೋಟಿಯನ್ನು ಖಾತೆಗೆ ಜಮಾ ಮಾಡಿರುವುದಾಗಿ ಸಹರಾ ತಿಳಿಸಿತ್ತು.
ಸಹರಾ ಸಂಸ್ಥಾಪಕ ಸುಬ್ರತಾ ರಾಯ್ ನವೆಂಬರ್ 2023 ರಲ್ಲಿ ಮರಣ ಹೊಂದಿದ್ದು ಆ ಬಳಿಕ ಸಮೂಹಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸಮೂಹ ಸಂಸ್ಥೆಗಳಿಗೆ ದುಸ್ತರವಾಗಿದೆ. ಜಾರಿ ನಿರ್ದೇಶನಾಲಯ, ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ಪೊಲೀಸರು ಹಾಗೂ ಇನ್ನಿತರ ತನಿಖಾ ಸಂಸ್ಥೆಗಳು ಆಸ್ತಿ ಮುಟ್ಟುಗೋಲಿಗೆ ನೀಡುತ್ತಿರುವ ಆದೇಶಗಳು ಕೂಡ ನಿರ್ಧಾರ ತೆಗೆದುಕೊಳ್ಳಲು ಅಡ್ಡಿ ಉಂಟುಮಾಡುತ್ತಿವೆ ಎಂದು ಸಹರಾ ಅಳಲು ತೋಡಿಕೊಂಡಿತ್ತು.
ಹೀಗಾಗಿ ಅದಾನಿ ಸಮೂಹ ಸಂಸ್ಥೆಗೆ ಆಸ್ತಿ ಮಾರಾಟ ಮಾಡಲು ಅನುಮತಿ ನೀಡಬೇಕು. ಎಲ್ಲಾ ಆಸ್ತಿ ಜಪ್ತಿ ಆದೇಶಗಳನ್ನು ತೆರವುಗೊಳಿಸಬೇಕು. ಮಾರಾಟ ಪ್ರಕ್ರಿಯೆ, ಆಕ್ಷೇಪಣೆ, ಸ್ಪರ್ಧಾತ್ಮಕ ಬೇಡಿಕೆ, ಹೂಡಿಕೆದಾರರು/ಸಾಲಗಾರರ ಹಕ್ಕುಗಳನ್ನು ನಿಭಾಯಿಸುವುದಕ್ಕಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಬೇಕು ಹಾಗೂ ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಅಧಿಕಾರಿಗಳು ತನ್ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳದಂತೆ; ಜೊತೆಗೆ ಪ್ರಕರಣ ದಾಖಲಿಸದಂತೆ ತಡೆಯಾಜ್ಞೆ ನೀಡಬೇಕು ಎಂದು ಅದು ಕೋರಿತ್ತು.
ಇದೇ ವೇಳೆ ಇನ್ನೊಂದು ಅರ್ಜಿ ಸಲ್ಲಿಸಿರುವ ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಲಿಮಿಟೆಡ್ (ಎಸ್‌ಐಆರ್‌ಇಸಿಎಲ್) ಆಸ್ತಿ ಮಾರಾಟದಿಂದ ಬರುವ ಹಣವನ್ನು ಮೊದಲು ವೇತನ, ಪಿಂಚಣಿ, ತೆರಿಗೆ ಹಾಗೂ ಸಾಲಗಾರರ ಬಾಕಿ ಪಾವತಿಗೆ ಬಳಸಿಕೊಳ್ಳಬೇಕು ಎಂದು ಹೇಳಿತ್ತು. ಸುಪ್ರೀಂ ಕೋರ್ಟ್ ಆತ್ಯಂತಿಕ ನ್ಯಾಯ ಒದಗಿಸಲು ಸಂವಿಧಾನದ 142 ನೇ ವಿಧಿಯಡಿ ವಿಶೇಷ ಪರಮಾಧಿಕಾರ ಚಲಾಯಿಸಬೇಕು ಎಂದು ಸಹರಾ ಸಮೂಹ ಕೋರಿತ್ತು.
ಸಹರಾ ₹24,030 ಕೋಟಿ ಮೊತ್ತದ ಷೇರುಗಳನ್ನು (ಒಎಫ್‌ಸಿಡಿಗಳು) ಸಂಗ್ರಹಿಸಿದ್ದು ಇದು ಅಕ್ರಮ ಎಂದು ಸೆಬಿ ದೂರಿತ್ತು. 2012 ರಲ್ಲಿ, ಸುಪ್ರೀಂ ಕೋರ್ಟ್ ಬಡ್ಡಿಯೊಂದಿಗೆ ಮೊತ್ತವನ್ನು ಮರುಪಾವತಿಸುವಂತೆ ಸಹಾರಾಗೆ ನಿರ್ದೇಶಿಸಿತ್ತು. ಸಹಾರಾ ಸುಮಾರು ₹16,000 ಕೋಟಿ ಠೇವಣಿ ಇಟ್ಟಿರುವುದಾಗಿ ಹೇಳಿತಾದರೂ ಹೂಡಿಕೆದಾರರಿಗೆ ಬಹಳ ಕಡಿಮೆ ಮೊತ್ತವನ್ನಷ್ಟೇ ಮರಳಿಸಲಾಗಿದೆ ಎಂದು ಸೆಬಿ ಆರೋಪಿಸಿತ್ತು.
ನಂತರ 2023 ಮಾರ್ಚ್ ಹಾಗೂ 2025 ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ₹10,000 ಕೋಟಿಯನ್ನು ಸಹಾರಾ ಸಹಕಾರಿ ಸೊಸೈಟಿಗಳ ಹೂಡಿಕೆದಾರರಿಗೆ ಹಿಂತಿರುಗಿಸಲು ಆದೇಶಿಸಿತ್ತು.
ಸಹಾರಾ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು . ಅದಾನಿ ಸಮೂಹವನ್ನು ಹಿರಿಯ ವಕೀಲ ಮುಕುಲ್ ರೋಹಟಗಿ ಪ್ರತಿನಿಧಿಸಿದ್ದರು. ಸೆಬಿ ಪರ ಹಿರಿಯ ವಕೀಲ ಪ್ರತಾಪ್ ವೇಣುಗೋಪಾಲ್ ಹಾಜರಿದ್ದರು.