ತಮ್ಮ ಸೋದರಳಿಯ ಅಜಿತ್ ಪವಾರ್ ನೇತೃತ್ವದ ಬಣವೇ ನಿಜವಾದ 'ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ' ಎಂದು ಘೋಷಿಸಿದ ಭಾರತದ ಚುನಾವಣಾ ಆಯೋಗದ (ಇಸಿಐ) ನಿರ್ಧಾರ ಪ್ರಶ್ನಿಸಿ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಬೇಕು ಎಂದು ಅಜಿತ್ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.
ʼನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ - ಶರದ್ ಚಂದ್ರ ಪವಾರ್ʼ ಎಂಬ ಹೆಸರಿನ ಬಳಕೆ ಮುಂದುವರೆಸಲು ಶರದ್ ಪವಾರ್ ಬಣಕ್ಕೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಇದೇ ವೇಳೆ ಅನುಮತಿ ನೀಡಿತು.
ಹೊಸ ಚಿಹ್ನೆಗಾಗಿ ಶರದ್ ಪವಾರ್ ಬಣ ಸಲ್ಲಿಸಿರುವ ಅರ್ಜಿ ಕುರಿತ ಒಂದು ವಾರದೊಳಗೆ ನಿರ್ಧರಿಸುವಂತೆ ಚುನಾವಣಾ ಆಯೋಗಕ್ಕೆ ಪೀಠ ತಿಳಿಸಿತು. ಪ್ರಕರಣವುನ್ನು ಮಾರ್ಚ್ 22ಕ್ಕೆ ಮುಂದೂಡಲಾಗಿದೆ.
ಅಜಿತ್ ಪವಾರ್ ನೇತೃತ್ವದ ಬಣ ನೈಜ ಎನ್‌ಸಿಪಿ ಎಂದು ಗುರುತಿಸಿ ಚುನಾವಣಾ ಆಯೋಗ ಫೆಬ್ರವರಿ 6ರಂದು ಕೈಗೊಂಡಿದ್ದ ನಿರ್ಧಾರ ಪ್ರಶ್ನಿಸಿ ಶರದ್ ಪವಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಜಿತ್ ಬಣ ಪ್ರಸ್ರುತ ಮಹಾರಾಷ್ಟ್ರದ ಆಡಳಿತಾರೂಢ ಏಕನಾಥ್ ಶಿಂಧೆ ಸರ್ಕಾರವನ್ನು ಬೆಂಬಲಿಸುತ್ತದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು ಎನ್‌ಸಿಪಿ ಶಾಸಕರ ಸಂಖ್ಯೆ 81. ಈ ಪೈಕಿ ಅಜಿತ್ ಪವಾರ್ ಅವರ ಪರವಾಗಿ 57 ಶಾಸಕರು ಅಫಿಡವಿಟ್ ಸಲ್ಲಿಸಿದ್ದರೆ, ಶರದ್ ಪವಾರ್ ಪರ ಕೇವಲ 28 ಎಂಎಲ್‌ಎಗಳು ಅಫಿಡವಿಟ್ ನೀಡಿದ್ದರು.
ಪಕ್ಷದ ಸಾಂಸ್ಥಿಕ ರಚನೆ, ಅದರ ಸದಸ್ಯರು ಮತ್ತು ಅವರು ಸ್ಪರ್ಧಿಸಿದ ಚುನಾವಣೆಗಳ ವಿವರಗಳಿಗೆ ಯಾವುದೇ ಆಧಾರ ಇಲ್ಲದಿರುವುದು ಕಂಡುಬಂದದ್ದರಿಂದ ಪಕ್ಷದ ಸಾಂಸ್ಥಿಕ ವಿಭಾಗದಲ್ಲಿ ಬಹುಮತ ಪರೀಕ್ಷೆ ನಡೆಸಲು ಕೋರಿದ್ದ ಅರ್ಜಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಇದನ್ನು ಈಗ ಸುಪ್ರೀಂ ಕೋರ್ಟ್‌ನಲ್ಲಿ ಶರದ್ ಪವಾರ್ ಪ್ರಶ್ನಿಸಿದ್ದರು.
ಸೋಮವಾರದ ವಿಚಾರಣೆ ವೇಳೆ ಶರದ್ ಪವಾರ್ ಪರವಾಗಿ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ, ಅಜಿತ್ ಪವಾರ್ ಪರವಾಗಿ ಮತ್ತೊಬ್ಬ ಹಿರಿಯ ವಕೀಲ ಮುಕುಲ್ ರೋಹಟ್ಗಿ ವಾದ ಮಂಡಿಸಿದರು. ಚುನಾವಣಾ ಆಯೋಗವನ್ನು ಹಿರಿಯ ನ್ಯಾಯವಾದಿ ಮಣಿಂದರ್ ಸಿಂಗ್ ಪ್ರತಿನಿಧಿಸಿದ್ದರು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]