ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆಯನ್ನು ಆಂಧ್ರದ ಹೊರಗೆ ವಿಚರಣೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಗನ್ ಅವರ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕೇಳಿದೆ [ರಘು ರಾಮಕೃಷ್ಣ ರಾಜು ಮತ್ತು ಸಿಬಿಐ ಇನ್ನಿತರರ ನಡುವಣ ಪ್ರಕರಣ].
ವಿಚಾರಣೆ ಏಕೆ ವಿಳಂಬವಾಗುತ್ತಿದೆ ಎಂಬುದನ್ನು ವಿವರಿಸುವಂತೆಯೂ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ ವಿ ಎನ್ ಭಟ್ಟಿ ಅವರಿದ್ದ ಪೀಠ ಸಿಬಿಐಗೆ ಕೇಳಿದೆ.
ವೈಎಸ್‌ಆರ್ ಕಾಂಗ್ರೆಸ್ ಸಂಸದ ರಘು ರಾಮಕೃಷ್ಣ ರಾಜು ಅವರು ತಮ್ಮದೇ ಪಕ್ಷದ ಅಧ್ಯಕ್ಷರಾದ ಮುಖ್ಯಮಂತ್ರಿ ಜಗನ್ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇದಾಗಿದೆ.
ಆಂಧ್ರದ ಈಗಿನ ಸರ್ಕಾರ ವಿಚಾರಣಾ ಪ್ರಕ್ರಿಯೆ ವಿಳಂಬಗೊಳಿಸುವ ಮೂಲಕ ಮುಖ್ಯಮಂತ್ರಿ ಅವರ ಪರವಾಗಿ ಕೆಲಸ ಮಾಡುತ್ತಿದೆ ಎಂದು ರಾಜು ಆರೋಪಿಸಿದ್ದು ಅವರು ಪ್ರಕರಣದ ವಿಚಾರಣೆಯನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ ಹೊರಗೆ ಇರುವ ನ್ಯಾಯಾಲಯದಲ್ಲಿ ನಡೆಸಬೇಕು ಎಂದು ಕೋರಿದ್ದಾರೆ.
ಮುಖ್ಯಮಂತ್ರಿ ಜಗನ್ ಅವರು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡಿದ ಹೈಕೋರ್ಟ್ ತೀರ್ಪನ್ನು ಸಿಬಿಐ ಕೂಡ ಪ್ರಶ್ನಿಸಿಲ್ಲ. ಕಳೆದ 10 ವರ್ಷಗಳಿಂದ ವಿಚಾರಣೆ ವಿಳಂಬ ಮಾಡಲಾಗುತ್ತಿದ್ದು ಆರೋಪವನ್ನು ಕೂಡ ನಿಗದಿಪಡಿಸಿಲ್ಲ ಎಂದು ಅವರು ದೂರಿದ್ದಾರೆ.
ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಗಾಗಿ ಮತ್ತು ಸಿಬಿಐ ಹಾಗೂ ಜಗನ್ ಶಾಮೀಲಾಗುವುದನ್ನು ತಪ್ಪಿಸುವುದಕ್ಕಾಗಿ ರಾಜ್ಯದಿಂದ ಹೊರಗೆ ಪ್ರಕರಣದ ವಿಚಾರಣೆ ನಡೆಸಬೇಕು ಎನ್ನುವುದು ರಾಜು ಅವರ ಕೋರಿಕೆಯಾಗಿದೆ. ರಾಜು ಪರ ವಕೀಲರಾದ ಬಾಲಾಜಿ ಶ್ರೀನಿವಾಸನ್ ಮತ್ತು ರೋಹನ್ ದಿವಾನ್ ವಾದ ಮಂಡಿಸಿದ್ದರು.