ದೇಶದಲ್ಲಿ ಗುಂಪು ಹತ್ಯೆಗೆ ಬಲಿಯಾದವರಿಗೆ ಏಕರೂಪ ಮತ್ತು ನ್ಯಾಯಯುತ ಪರಿಹಾರ ನೀತಿ ರೂಪಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕೇಳಿದೆ [ಇಂಡಿಯನ್ ಮುಸ್ಲಿಮ್ಸ್ ಫಾರ್ ಪ್ರೋಗ್ರೆಸ್ ಅಂಡ್ ರಿಫಾರ್ಮ್ಸ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ʼಇಂಡಿಯನ್ ಮುಸ್ಲಿಮ್ಸ್ ಫಾರ್ ಪ್ರೋಗ್ರೆಸ್ ಅಂಡ್ ರಿಫಾರ್ಮ್ಸ್ʼ ವಕೀಲ ರಿಜ್ವಾನ್ ಅಹ್ಮದ್ ಅವರ ಮೂಲಕ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ನೋಟಿಸ್ ಜಾರಿಗೊಳಿಸಿತು.
ದ್ವೇಷಾಪರಾಧ ಮತ್ತು ಗುಂಪು ಹತ್ಯೆಯ ಸಂತ್ರಸ್ತರಿಗೆ ಪರಿಹಾರ ನೀಡುತ್ತಿರುವ ರಾಜ್ಯ ಸರ್ಕಾರಗಳ ಪ್ರಸ್ತುತ ವಿಧಾನವು ' ತಾರತಮ್ಯ ಹಾಗೂ ಮನಸೋ ಇಚ್ಛೆಯಿಂದ ಕೂಡಿದ್ದ ಅತ್ಯಲ್ಪವಾಗಿದೆ. ಇದರಲ್ಲಿ ಎದ್ದುಕಾಣುವ ವಿರೋಧಾಭಾಸವಿದೆ' ಎಂದು ಅರ್ಜಿದಾರರು ವಾದಿಸಿದ್ದರು.
ಇಂತಹ ಘಟನೆಗಳು ಕಾನೂನಾತ್ಮಕ ಆಡಳಿತದ ಮೇಲೆ ಮಹತ್ವದ ಪ್ರಭಾವ ಬೀರಲಿದೆ ಎಂದು ಅರ್ಜಿ ದೂರಿದೆ. ದ್ವೇಷಾಪರಾಧ ಮತ್ತು ಗುಂಪು ಹತ್ಯೆಗಳಿಂದ ಉಂಟಾಗುವ ಆಘಾತವು ಜೀವನಪರ್ಯಂತ ಕಾಡಲಿದೆ ಎಂದು ಒತ್ತಿಹೇಳಲಾಯಿತು.
ತೆಹ್ಸೀನ್ ಪೂನಾವಾಲ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ರೂಪಿಸಲಾದ ಪರಿಹಾರ ಯೋಜನೆಗಳಿಗೆ ಈ ನಿಟ್ಟಿನಲ್ಲಿ ಸೂಕ್ತ ಮಾರ್ಪಾಡು ತರಬೇಕೆಂದು ಅರ್ಜಿದಾರರು ಪ್ರಾರ್ಥಿಸಿದರು.
ಪ್ರತಿವಾದಿಗಳು ಪ್ರತಿಕ್ರಿಯೆನೀಡಲು ಅನುವಾಗುವಂತೆ ಪ್ರತಿವಾದಿಗಳಿಗೆ ತಮ್ಮ ಉತ್ತರಗಳನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ಆರು ವಾರಗಳ ಕಾಲಾವಕಾಶ ನೀಡಿದೆ.