ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ (ಇ ಡಿ) ನೋಟಿಸ್ ಜಾರಿ ಮಾಡಿದೆ.
ಸಿಸೋಡಿಯಾ ಅವರ ಪತ್ನಿಯ ಆರೋಗ್ಯ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬೇಲಾ ಎಂ ತ್ರಿವೇದಿ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠ ವೈದ್ಯಕೀಯ ಜಾಮೀನಿಗಾಗಿ ಮಧ್ಯಂತರ ಅರ್ಜಿ ಸಲ್ಲಿಸುವಂತೆ ಸೂಚಿಸಿತು.
ಸಿಸೋಡಿಯಾ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಸಿಸೋಡಿಯಾ ಅವರ ಪತ್ನಿಗೆ ಲಘು ಪಾರ್ಶ್ವವಾಯು ಉಂಟಾಗಬಹುದಾದಂತಹ ಸ್ಥಿತಿ ಇದೆ ಎಂದರು ಆಗ ನ್ಯಾ. ಖನ್ನಾ ಅವರು “ನನಗೆ ಅಂತಹ ಸ್ಥಿತಿ ಚೆನ್ನಾಗಿ ತಿಳಿದಿದ್ದು ಅದು ಲಘು ಎನ್ನುವುದಕ್ಕಿಂತಲೂ ಹೆಚ್ಚು ಗಂಭೀರವಾದುದಾಗಿರಲಿದೆ” ಎಂದರು.
ಈ ಹಂತದಲ್ಲಿ ಪ್ರತಿವಾದಿಗಳಾದ ತನಿಖಾ ಸಂಸ್ಥೆಗಳು ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ ಪೀಠ ಮಧ್ಯಂತರ ನಿರ್ದೇಶನ ನೀಡುವುದಕ್ಕಾಗಿ ಪ್ರಕರಣವನ್ನು ಜುಲೈ 28ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ದಾಖಲಿಸಿದ್ದ ಪ್ರಕರಣಗಳಲ್ಲಿ ಜಾಮೀನು ನೀಡಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಸೋಡಿಯಾ ಸುಪ್ರೀಂ ಕೋರ್ಟ್‌ಗೆ ಈ ಹಿಂದೆ ಅರ್ಜಿ ಸಲ್ಲಿಸಿದ್ದರು.