ramesh sogemane
ಸುದ್ದಿಗಳು

ಪರವಾನಗಿ ಇಲ್ಲದೇ ಬಂದೂಕು ಇರಿಸಿಕೊಳ್ಳಲು ಕೊಡವರಿಗೆ ವಿನಾಯಿತಿ: ಕರ್ನಾಟಕ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಕೊಡವರಿಗೆ ಶಸ್ತ್ರಾಸ್ತ್ರ ಹೊಂದಲು ಪರವಾನಗಿಯಿಂದ ವಿನಾಯಿತಿ ನೀಡಿರುವುದನ್ನು ಎತ್ತಿ ಹಿಡಿದು ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್ 2021ರಲ್ಲಿ ನೀಡಿದ್ದ ತೀರ್ಪು ಪ್ರಶ್ನಿಸಿ ನಿವೃತ್ತ ಸೇನಾ ಅಧಿಕಾರಿಯೊಬ್ಬರು ಮನವಿ ಸಲ್ಲಿಸಿದ್ದರು.

Bar & Bench

ಶಸ್ತ್ರಾಸ್ತ್ರಗಳನ್ನು ಒಯ್ಯಲು ಹಾಗೂ ಇರಿಸಿಕೊಳ್ಳಲು ಶಸ್ತ್ರಾಸ್ತ್ರ ಕಾಯಿದೆ- 1959ರ ಅಡಿ ಕೊಡವರಿಗೆ ಪರವಾನಗಿ ಹೊಂದುವುದರಿಂದ ನೀಡಲಾಗಿರುವ ವಿನಾಯಿತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಕ್ಯಾಪ್ಟನ್‌ ಚೇತನ್‌ ವೈ ಕೆ (ನಿವೃತ್ತರು) ವರ್ಸಸ್‌ ಕೇಂದ್ರ ಸರ್ಕಾರ].

ಕೊಡಗು ಜಿಲ್ಲೆಯ ಕೊಡವರಿಗೆ ಹಾಗೂ ಜಮ್ಮಾ ಹಿಡುವಳಿದಾರರಿಗೆ ಶಸ್ತ್ರಾಸ್ತ್ರ ಕಾಯಿದೆ 1959ರ ಅನ್ವಯ ಶಸ್ತ್ರಾಸ್ತ್ರ ಹೊಂದಲು ಕೇಂದ್ರ ಸರ್ಕಾರ ನೀಡಿರುವ ವಿನಾಯಿತಿಯನ್ನು ಪ್ರಶ್ನಿಸಿ ಸೇನೆಯ ನಿವೃತ್ತ ಕ್ಯಾಪ್ಟನ್‌ ಚೇತನ್‌ ವೈ ಕೆ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠ ಸರ್ಕಾರದ ಪ್ರತಿಕ್ರಿಯೆ ಕೇಳಿತು.

ಕರ್ನಾಟಕ ಹೈಕೋರ್ಟ್‌ನ ಅಂದಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ಹಾಗೂ ನ್ಯಾ. ಎಸ್‌ ಎಸ್‌ ಮಗದುಮ್‌ ಅವರಿದ್ದ ಪೀಠ “ಕೊಡವ ಸಮುದಾಯ ಯೋಧ ಸಮುದಾಯವಾಗಿದ್ದು ವಿನಾಯಿತಿಯ ಸವಲತ್ತನ್ನು ಸ್ವಾತಂತ್ರ್ಯ ಪೂರ್ವಕಾಲದಿಂದಲೂ ಅನುಭವಿಸುತ್ತಿದೆ, ಅದೇ ರೀತಿ ಜಮ್ಮಾ ಹಿಡವಳಿದಾರರು ಸಹ ಸ್ವಾತಂತ್ರ್ಯಪೂರ್ವದಿಂದಲೂ ವಿನಾಯಿತಿಯನ್ನು ಅನುಭವಿಸುತ್ತಿದ್ದಾರೆ. ಹತ್ತು ವರ್ಷಗಳ ಅವಧಿಗೆ ಈ ವಿನಾಯಿತಿಯನ್ನು ಸೂಕ್ತ ರೀತಿಯಲ್ಲಿ ನೀಡಲಾಗಿದೆ. ಅನಿಯಮಿತ ಕಾಲದವರೆಗೇನೂ ವಿನಾಯಿತಿಯನ್ನು ನೀಡಲಾಗಿಲ್ಲ. ನೀಡಲಾಗಿರುವ ವಿನಾಯಿತಿಯು ಸಹ ಕೆಲವೊಂದು ನಿಬಂಧನೆ, ಷರತ್ತುಗೊಳಪಟ್ಟಿದೆ. ಹೀಗಾಗಿ, ಅಧಿಸೂಚನೆಯ ಸಾಂವಿಧಾನಿಕ ಸಿಂದುತ್ವವನ್ನು ಎತ್ತಿಹಿಡಿಯಲಾಗಿದೆ,” ಎಂದು ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ಪ್ರಮುಖಾಂಶಗಳು ಹೀಗಿವೆ:

  • ಅಕ್ಟೋಬರ್ 2019ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಜಾತಿ/ಜನಾಂಗ ಮತ್ತು ಪೂರ್ವಿಕರ ಭೂ ಒಡೆತನವನ್ನು ಆಧರಿಸಿ ತಾರತಮ್ಯ ಉಂಟುಮಾಡುತ್ತದೆ. ಜೊತೆಗೆ ಸಂವಿಧಾನದ 14, 15 ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸುತ್ತದೆ.

  • ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 41ರ ಪ್ರಕಾರ, ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ಮಾತ್ರ ಶಸ್ತ್ರಾಸ್ತ್ರ ಪರವಾನಗಿ ಪಡೆಯುವುದರಿಂದ ವಿನಾಯಿತಿ ನೀಡಬಹುದು. ಆದರೆ, ಕೊಡವ ಸಮುದಾಯಕ್ಕೆ ಅಂತಹ ವಿನಾಯಿತಿ ನೀಡುವ ಕುರಿತು ಅಧಿಸೂಚನೆಯಲ್ಲಿ ಯಾವುದೇ ಕಾರಣವನ್ನು ನೀಡಿಲ್ಲ.

  • ಅದಲ್ಲದೆ, ವಿನಾಯಿತಿ ಪಡೆದ ವರ್ಗಗಳು/ಜಾತಿಗಳನ್ನು ಗುರುತಿಸಲು ಅಧಿಸೂಚನೆಯಲ್ಲಿ ಬಳಸಲಾದ ಭಾಷೆಯನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಂದ ಯಾಂತ್ರಿಕವಾಗಿ ಮತ್ತು ಯಥಾವತ್ತು ಎರವಲು ಪಡೆಯಲಾಗಿದೆ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತದ ಜನರನ್ನು ನಿಶ್ಯಸ್ತ್ರಗೊಳಿಸಲು ಹಾಗೂ ಅವರಿಗೆ ನಿಷ್ಠರಾಗಿರುವವರಿಗೆ ಮಾತ್ರ ವಿನಾಯಿತಿ ನೀಡಲು ಬ್ರಿಟಿಷರು ಈ ರೀತಿ ಮಾಡಿದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವಕೀಲರಾದ ಅನುಪಮ್ ಸಿನ್ಹಾ, ಅವಿನಾಶ್ ಶರ್ಮಾ ಮತ್ತು ಅಪೂರ್ವ್ ಝಾ ಮೂಲಕ ಮೇಲ್ಮನವಿ ಸಲ್ಲಿಸಲಾಗಿದೆ. ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಜಯಂತ್ ಮೆಹ್ತಾ ಹಾಜರಿದ್ದರು.