ಸುದ್ದಿಗಳು

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಶರತ್‌ ಜವಳಿ ನಿಧನ

ಧಾರವಾಡ ಮೂಲದ ಶರತ್‌ ಜವಳಿ ಅವರು ಬೆಂಗಳೂರಿನ ಕಾನೂನು ಕಾಲೇಜಿನಲ್ಲಿ ಪದವಿ ಪಡೆದ ನಂತರ 1964ರಲ್ಲಿಯೇ ದೆಹಲಿಗೆ ಸ್ಥಳಾಂತರಗೊಂಡು ಅಲ್ಲಿ ಹಿರಿಯ ವಕೀಲ ಎಸ್‌ ವಿ ಗುಪ್ತೆ ಅವರ ಬಳಿ ಕಿರಿಯ ವಕೀಲರಾಗಿ ಸೇರಿದ್ದರು.

Bar & Bench

ಕೃಷ್ಣಾ-ಕಾವೇರಿ ಸೇರಿದಂತೆ ಅಂತಾರಾಜ್ಯ ನದಿ ವಿವಾದಗಳಲ್ಲಿ ಹಲವು ದಶಕಗಳ ಕಾಲ ಕರ್ನಾಟಕವನ್ನು ಪ್ರತಿನಿಧಿಸಿದ್ದ ಧಾರವಾಡ ಮೂಲದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಶರತ್‌ ಜವಳಿ ಅವರು ದೆಹಲಿಯಲ್ಲಿ ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಶರತ್‌ ಜವಳಿ ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಒಬ್ಬ ಪುತ್ರಿ ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ಶುಕ್ರವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಧಾರವಾಡ ಮೂಲದ ಶರತ್‌ ಜವಳಿ ಅವರು ಬೆಂಗಳೂರಿನ ಕಾನೂನು ಕಾಲೇಜಿನಲ್ಲಿ ಪದವಿ ಪಡೆದ ನಂತರ 1964ರಲ್ಲಿಯೇ ದೆಹಲಿಗೆ ಸ್ಥಳಾಂತರಗೊಂಡು ಅಲ್ಲಿ ಹಿರಿಯ ವಕೀಲ ಎಸ್‌ ವಿ ಗುಪ್ತೆ ಅವರ ಬಳಿ ಕಿರಿಯ ವಕೀಲರಾಗಿ ಸೇರಿದ್ದರು.

1968ರಿಂದ ಕೃಷ್ಣಾ, ಕಾವೇರಿ ಮತ್ತು ಮಹದಾಯಿ ಸೇರಿದಂತೆ ಎಲ್ಲಾ ಅಂತಾರಾಜ್ಯ ನದಿ ವಿವಾದಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಅವರು ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜೊತೆಗೆ ಅವರು ಬೆಳಗಾವಿ ಗಡಿ ವಿವಾದ ಇತ್ಯರ್ಥದ ಕಾನೂನು ಹೋರಾಟದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 52 ವರ್ಷಗಳ ಕಾಲ ಸುದೀರ್ಘ ಕಾಲ ವಕೀಲಿಕೆ ನಡೆಸಿದ್ದರು.

ಸುಮಾರು ಮೂರು ದಶಕಗಳ ಕಾಲ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯಯೊಂದಿಗೆ ಶೈಕ್ಷಣಿಕ ಸಂಬಂಧ ಹೊಂದಿದ್ದ ಅವರಿಗೆ ವಿಶ್ವವಿದ್ಯಾಲಯ ಫೆಲೋಶಿಪ್‌ ನೀಡಿ ಗೌರವಿಸಿತ್ತು, 2024ರಲ್ಲಿಸಿಡ್ನಿಯ ಸುಸೆಕ್ಸ್‌ ಕಾಲೇಜು ಅವರಿಗೆ ಫೆಲೋ ನೀಡಿತ್ತು. ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿತ್ತು. ತಮ್ಮ ತಂದೆ ಎಸ್‌ ಸಿ ಜವಳಿ ಗೌರವಾರ್ಥ ಹೈಕೋರ್ಟ್‌ನ ಧಾರವಾಡ ಪೀಠ ಮತ್ತು ಹಾವೇರಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗ್ರಂಥಾಲಯಗಳನ್ನು ಅವರು ತೆರೆದಿದ್ದರು.

ಶ್ರೀಯುತರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ನಾಡಿನ ಗಣ್ಯರು, ನೀರಾವರಿ ತಜ್ಞರು ಸಂತಾಪ ಸೂಚಿಸಿದ್ದಾರೆ. ನಾಡಿಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ.