ಕೊಲೆ ಆರೋಪಿ ಪರ ವಾದಿಸಲು ವಕೀಲರನ್ನು ನೇಮಿಸಿದ ದಿನವೇ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಕಲ್ಕತ್ತಾ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಈಚೆಗೆ ಬದಿಗೆ ಸರಿಸಿದೆ [ನಿರಂಜನ್ ದಾಸ್ ವಿರುದ್ಧ ಪಶ್ಚಿಮ ಬಂಗಾಳ].
ಕಾನೂನು ನೆರವು ಸಲಹೆಗಾರರು ಸಾಕಷ್ಟು ತಯಾರಿ ನಡೆಸಲು ನ್ಯಾಯಾಲಯಗಳು ಸಮಯಾವಕಾಶ ನೀಡಬೇಕು ಇದರಿಂದ ಪ್ರಕರಣದ ವಾಸ್ತವಾಂಶಗಳ ಬಗ್ಗೆ ಅವರಿಗೆ ಚೆನ್ನಾಗಿ ಅರಿವು ಮೂಡುತ್ತದೆ. ಆದರೆ ಹೈಕೋರ್ಟ್ ಈ ಪ್ರಕರಣದಲ್ಲಿ ಸೂಕ್ತ ಸಮಯಾವಕಾಶ ನೀಡಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಪೀಠ ತಿಳಿಸಿತು.
“ಇದು ಐಪಿಸಿ ಸೆಕ್ಷನ್ 302ರ ಅಡಿ ಎಸಗಿದ ಶಿಕ್ಷಾರ್ಹ ಅಪರಾಧಕ್ಕಾಗಿ ಮೇಲ್ಮನವಿದಾರನನ್ನು ಅಪರಾಧಿ ಎಂದು ಸಾಬೀತುಪಡಿಸಿ ಜೀವಾವಧಿ ಶಿಕ್ಷೆಗೆ ಗುರಿಪಡಿಸಿದ ಪ್ರಕರಣವಾಗಿದೆ. ಆದ್ದರಿಂದ ತಾನು ವಿಚಾರಣೆಗೆ ನೇಮಿಸಿದ ವಕೀಲರಿಗೆ ಸೂಕ್ತ ಸಮಯಾವಕಾಶ ನೀಡುವುದು ನ್ಯಾಯಾಲಯದ ಕರ್ತವ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರನ್ನು ನೇಮಿಸಿದ ದಿನವೇ ಹೈಕೋರ್ಟ್ ಮೇಲ್ಮನವಿಯ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಆರೋಪಿ ಪರ ವಾದಿಸಲು ನೇಮಕಗೊಂಡ ವಕೀಲೆಗೆ ಪ್ರಕರಣದ ಬಗ್ಗೆ ತಯಾರಿ ನಡೆಸಲು ಸೂಕ್ತ ಸಮಯಾವಕಾಶ ಕೂಡ ನೀಡಿಲ್ಲ” ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ವಕೀಲರನ್ನು ನೇಮಿಸಿಕೊಳ್ಳಲಾಗದ ಆರೋಪಿಗೆ ವಕೀಲರನ್ನು ನೇಮಕ ಮಾಡುವ ಉದ್ದೇಶ ಅವರಿಗೆ ನ್ಯಾಯ ದೊರೆಯುವಂತೆ ಮಾಡುವುದಾಗಿದೆ ಎಂದ ಸುಪ್ರೀಂ ಕೋರ್ಟ್, ಆದೇಶ ಬದಿಗೆ ಸರಿಸಿ ಹೊಸದಾಗಿ ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ಪ್ರಕರಣ ಮರಳಿಸಿತು.
ಕೊಲೆ ಆರೋಪ ಎದುರಿಸುತ್ತಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನಿಗೆ ಕಾನೂನು ನೆರವು ಸಲಹೆಗಾರನನ್ನು ನೇಮಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ವಕೀಲರನ್ನು ನೇಮಕ ಮಾಡಿದ ದಿನವೇ ಹೈಕೋರ್ಟ್ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.