Jail 
ಸುದ್ದಿಗಳು

ಜಾಮೀನಿನ ನಂತರವೂ ಮುಂಜಾಗ್ರತಾ ಕ್ರಮವಾಗಿ ಬಂಧಿಸುವುದು ಕಾನೂನಿನ ದುರುಪಯೋಗ: ಸುಪ್ರೀಂ ಕೋರ್ಟ್ ಕಿಡಿ

ಕೇರಳ ಸಮಾಜವಿರೋಧಿ ಚಟುವಟಿಕೆಗಳ (ತಡೆ) ಕಾಯಿದೆಯಡಿ ಕೇರಳ ಮೂಲದ ಖಾಸಗಿ ಸಾಲದಾತನೊಬ್ಬನನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ ಆದೇಶ ರದ್ದಗೊಳಿಸುವಾಗ ಪೀಠ ಈ ವಿಚಾರ ತಿಳಿಸಿದೆ.

Bar & Bench

ಆರೋಪಿಗಳಿಗೆ ಜಾಮೀನು ದೊರೆತ ನಂತರವೂ ಅವರನ್ನು ಜೈಲಿನಲ್ಲಿಡಲು ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮವಾಗಿ ಬಂಧನ ನಡೆಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದೆ [ ಧನ್ಯ ಎಂ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಮುಂಜಾಗ್ರತಾ ಕ್ರಮವಾಗಿ ನಡೆಯುವ ಬಂಧನ ಸಂವಿಧಾನಕ್ಕೆ ಅಪವಾದವಾಗಿದ್ದು ನಿಯಮಿತ ಅಪರಾಧಿಕ ಪ್ರಕ್ರಿಯೆಗೆ ಅದು ಪರ್ಯಾಯವಲ್ಲ ಎಂದು ನ್ಯಾಯಾಲಯ ಹೇಳಿದೆ. ಸರ್ಕಾರಿ ಅಧಿಕಾರಿಗಳು ಮುಂಜಾಗ್ರತಾ ಬಂಧನ ಪ್ರಕ್ರಿಯೆ ಆಶ್ರಯಯಿಸಬಾರದು. ಮತ್ತು ನಿರ್ದಿಷ್ಟ ಆಧಾರಗಳಿಂದ ಬೆಂಬಲಿತವಾದ ಬಲವಾದ ಕಾರಣಗಳು ಇಲ್ಲದಿದ್ದರೆ ಜಾಮೀನು ರದ್ದತಿ ಕೋರುವಂತಹ ಸಾಮಾನ್ಯ ಕಾನೂನು ಕಾರ್ಯವಿಧಾನಗಳನ್ನು ಮೀರಿ ಹೋಗಬಾರದು ಎಂದು ಹೇಳಿದೆ.

ಕೇರಳ ಸಮಾಜವಿರೋಧಿ ಚಟುವಟಿಕೆಗಳ (ತಡೆ) ಕಾಯಿದೆಯಡಿ ಕೇರಳ ಮೂಲದ ಖಾಸಗಿ ಸಾಲದಾತನೊಬ್ಬನನ್ನು ಕುಖ್ಯಾತ ಗೂಂಡಾ ಎಂದು ಹಣೆಪಟ್ಟಿ ಹಚ್ಚಿ ಪಾಲಕ್ಕಾಡ್‌ ಸೆಷನ್ಸ್‌ ನ್ಯಾಯಾಲಯದ ಆದೇಶದಂತೆ ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿತ್ತು. ಬಂಧನದ ವಿರುದ್ಧ ಆತನ ಪತ್ನಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಕೇರಳ ಹೈಕೋರ್ಟ್‌ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಆಕೆ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ಪ್ರಕರಣದಲ್ಲಿ ಮುಂಜಾಗ್ರತಾ ಬಂಧನ ಕಾನೂನನ್ನು ಅನ್ವಯಿಸುವುದು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಮನಮೋಹನ್ ಅವರಿದ್ದ ಪೀಠವು ತೀರ್ಪು ನೀಡಿತು.

ಸಾರ್ವಜನಿಕ ಸುವ್ಯವಸ್ಥೆಗೆ ಅಸಾಧಾರಣ ಬೆದರಿಕೆಗಳನ್ನು ಒಡ್ಡುವುದನ್ನು ತಡೆಯಲು ರೂಪಿಸಲಾದ ಮುಂಜಾಗ್ರತಾ ಬಂಧನ ಕಾನೂನಿಡಿ ರಾಜೇಶ್‌ ಅವರ ಕೃತ್ಯಗಳು ಪ್ರಭುತ್ವದ ಸ್ವಾತಂತ್ರ್ಯವನ್ನು ಹೇಗೆ ಮೊಟಕುಗೊಳಿಸುತ್ತವೆ ಎಂಬುದನ್ನು ಹೇಳಲು ಕೇರಳ ಸರ್ಕಾರ ವಿಫಲವಾಗಿದೆ ಎಂದ ಅದು ಬಂಧನ ಆದೇಶ ಮತ್ತು ಹೈಕೋರ್ಟ್‌ ಆದೇಶಗಳೆರಡನ್ನೂ ರದ್ದುಗೊಳಿಸಿತು.  

ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಪ್ರಕ್ರಿಯೆ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಬಳಸಬೇಕಾದ ಕಠಿಣ ಕಾನೂನು ಸಾಂವಿಧಾನಿಕ ತತ್ವ ಎಂದು ಪೀಠ ಗಮನಸೆಳೆದಿದೆ.

[ತೀರ್ಪಿನ ಪ್ರತಿ]

Dhanya_M_vs_State_of_Kerala.pdf
Preview