Supreme Court, Hijab 
ಸುದ್ದಿಗಳು

ಹಿಜಾಬ್ ನಿಷೇಧ: ಮುಂಬೈ ಕಾಲೇಜಿಗೆ ಸುಪ್ರೀಂ ಕೋರ್ಟ್ ತರಾಟೆ; ವಸ್ತ್ರ ಸಂಹಿತೆಗೆ ತಡೆ

ಕಾಲೇಜು ಆಡಳಿತ ಮಂಡಳಿಯ ನಿರ್ದೇಶನ ವಿದ್ಯಾರ್ಥಿಯ ಧರ್ಮ ಬಹಿರಂಗಪಡಿಸುವುದನ್ನು ತಡೆಯುವ ಗುರಿ ಹೊಂದಿದ್ದು ಅವರು ತಮ್ಮ ಶಿಕ್ಷಣದ ಮೇಲೆ ಗಮನಹರಿಸಲು ಅನುವು ಮಾಡಿಕೊಡುತ್ತದೆ ಎಂದು ಬಾಂಬೆ ಹೈಕೋರ್ಟ್ ಈ ಹಿಂದೆ ಹೇಳಿತ್ತು.

Bar & Bench

ತಮ್ಮ ಧರ್ಮವನ್ನು ಪ್ರತಿನಿಧಿಸುವ ಬುರ್ಖಾ, ನಖಾಬ್‌, ಪದಕ, ಟೊಪ್ಪಿಗೆ ಅಥವಾ ಸ್ಟೋಲ್‌ಗಳಂತಹ ಬಟ್ಟೆ ಧರಿಸುವುದನ್ನು ನಿರ್ಬಂಧಿಸಿದ್ದ ಮುಂಬೈನ ಕಾಲೇಜನ್ನು ಸುಪ್ರೀಂ ಕೋರ್ಟ್‌ ಶನಿವಾರ ತರಾಟೆಗೆ ತೆಗೆದುಕೊಂಡಿದ್ದು ಸಂಸ್ಥೆ ಹೊರಡಿಸಿದ್ದ ನೋಟಿಸ್‌ಗೆ ಭಾಗಶಃ ತಡೆಯಾಜ್ಞೆ ನೀಡಿದೆ [ಜೈನಾಬ್ ಚೌಧರಿ ಮತ್ತಿತರರು ಹಾಗೂ ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ ಎನ್‌ ಜಿ ಆಚಾರ್ಯ ಮತ್ತು ಡಿ ಕೆ ಮರಾಠೆ ಕಾಲೇಜು ನಡುವಣ ಪ್ರಕರಣ].

ಇದೇ ವೇಳೆ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ನೋಟಿಸ್‌ ಜಾರಿ ಮಾಡಿದೆ.

ಕಾಲೇಜು ಹೊರಡಿಸಿದ್ದ ಸುತ್ತೋಲೆಯ 2ನೇ ಷರತ್ತಿಗೆ ನ್ಯಾಯಾಲಯ ಭಾಗಶಃ ತಡೆ ನೀಡಿರುವ ನ್ಯಾಯಾಲಯ ಕಾಲೇಜಿನ ಈ ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿತು ಮತ್ತು ವಿದ್ಯಾರ್ಥಿಗಳು ತಮಗೆ ಬೇಕಾದುದನ್ನು ಧರಿಸಲು ಅವಕಾಶ ನೀಡಬೇಕು ಎಂದಿತು.

ಕಾಲೇಜಿನ ನಿರ್ಧಾರವು ಮಹಿಳೆಯರ ಸಬಲೀಕರಣದ ವಿರುದ್ಧ ಇದೆ ಎಂದು ನ್ಯಾಯಾಲಯ ಹೇಳಿದೆ.

"ಮಹಿಳೆಯರಿಗೆ ಏನು ಧರಿಸಬೇಕೆಂದು ಹೇಳುವ ಮೂಲಕ ನೀವು ಅವರನ್ನು ಯಾವ ರೀತಿ ಸಬಲೀಕರಣ ಮಾಡುತ್ತಿರುವಿರಿ? ಹೇಳುವುದನ್ನು ಕಡಿಮೆ ಮಾಡಿದರೆ ಉತ್ತಮ. ಮಹಿಳೆಗೆ ಆಯ್ಕೆ ಎಲ್ಲಿದೆ? ಅವರು ಹಿಜಾಬ್‌ ಧರಿಸುತ್ತಾರೆ ಎಂಬ ವಿಚಾರಕ್ಕೆ ನೀವು ಇದ್ದಕ್ಕಿದ್ದಂತೆ ಎಚ್ಚರಗೊಂಡಿದ್ದೀರಿ. ಸ್ವಾತಂತ್ರ್ಯ ಬಂದು ಎಷ್ಟೋ ವರ್ಷಗಳಾದ ನಂತರ ಇದನ್ನೆಲ್ಲಾ ಹೇಳುತ್ತಿರುವುದು ದುರದೃಷ್ಟಕರ. ಮತ್ತು ಈ ದೇಶದಲ್ಲಿ ಧರ್ಮವಿದೆ ಎಂದು ನೀವು ಹೇಳುತ್ತಿದ್ದೀರಿ” ಎಂದು ನ್ಯಾಯಮೂರ್ತಿ ಕುಮಾರ್ ಹೇಳಿದರು.

ವಿದ್ಯಾರ್ಥಿಗಳ ಧರ್ಮವನ್ನು ಬಹಿರಂಗಪಡಿಸುವುದು ತನಗೆ ಇಷ್ಟವಿಲ್ಲ ಎಂಬ ಕಾಲೇಜಿನ ನಿಲುವಿನ ಕುರಿತು ಆಕ್ಷೇಪಿಸಿದ ನ್ಯಾ. ಖನ್ನಾ ಅವರು "ಹೆಸರುಗಳಲ್ಲಿಯೂ ಧರ್ಮವಿದೆ. ಅಂತಹ ನಿಯಮ ಹೇರಬೇಡಿ” ಎಂದು ಎಚ್ಚರಿಕೆ ನೀಡಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್‌, ವಿದ್ಯಾರ್ಥಿಗಳನ್ನು ತರಗತಿಗಳಿಗೆ ಹಾಜರಾಗದಂತೆ ತಡೆಹಿಡಿಯಲಾಗಿದ್ದು ಹಾಜರಾತಿ ನೀಡುತ್ತಿಲ್ಲ ಎಂದು ಹೇಳಿದರು.

ಆದರೆ ಕಾಲೇಜು ಆಡಳಿತ ಮಂಡಳಿ ಪರ ಹಾಜರಿದ್ದ ವಕೀಲೆ ಮಾಧವಿ ದಿವಾನ್‌ ನಿಷೇಧವನ್ನು ಸಮರ್ಥಿಸಿಕೊಂಡರು. ಕಾಲೇಜಿನಲ್ಲಿ 441 ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿದ್ದು, ಮೂವರು ಮಾತ್ರ ಹಿಜಾಬ್ ಧರಿಸಲು ಬಯಸುತ್ತಿದ್ದಾರೆ ಎಂದರು.‌

ಆದರೆ ಈ ವಾದವನ್ನು ಒಪ್ಪದ ನ್ಯಾಯಾಲಯ ಕಾಲೇಜು ಆಡಳಿತ ಮಂಡಳಿ ಇದಕ್ಕಿದ್ದಂತೆ ಈ ನಿರ್ಧಾರಕ್ಕೆ ಬಂದದ್ದು ಏಕೆ ಎಂದು ಪ್ರಶ್ನಿಸಿತು.

ಕಾಲೇಜುಗಳು ಇಂತಹ ನಿಯಮ ರೂಪಿಸುವುದನ್ನು ನಿಲ್ಲಿಸಬೇಕು ಎಂದು ನ್ಯಾಯಮೂರ್ತಿ ಕುಮಾರ್ ಇದೇ ವೇಳೆ ಹೇಳಿದರು. ತಿಲಕ ಅಥವಾ ಬಿಂದಿ ಇಟ್ಟುಕೊಳ್ಳುವವರಿಗೆ ಕಾಲೇಜಿಗೆ ಅವಕಾಶ ನೀಡುವುದಿಲ್ಲವೇ ಎಂದು ನ್ಯಾಯಾಲಯ ಪ್ರಶ್ನಿಸಿತು.