ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ
ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಚಿತ್ರ ಮೂಲ: ಫೇಸ್ ಬುಕ್
ಸುದ್ದಿಗಳು

ಪತಂಜಲಿಯಿಂದ ನ್ಯಾಯಾಲಯದ ಆದೇಶದ ಉಲ್ಲಂಘನೆ: ಸುಪ್ರೀಂ ಕೆಂಡಾಮಂಡಲ; ವಚನಭ್ರಷ್ಟ, ಕಪಟ ನಡೆಯೆಂದು ಗುದ್ದು

Bar & Bench

ವೈಜ್ಞಾನಿಕ ತಳಹದಿಯ ಔಷಧಗಳನ್ನು ಗುರಿಯಾಗಿಸಿಕೊಂಡ ಜಾಹೀರಾತುಗಳನ್ನು ನಿಲ್ಲಿಸಲು ವಿಫಲವಾಗಿ ಕೇವಲ ನೆಪಮಾತ್ರದ ಕ್ಷಮೆಯಾಚನೆ ಅಫಿಡವಿಟ್‌ ಸಲ್ಲಿಸಿದ್ದ ಪತಂಜಲಿ ಆಯುರ್ವೇದ ಸಂಸ್ಥೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ).

ಇಂತಹ ಜಾಹೀರಾತುಗಳ ಪ್ರಸಾರ ನಿಲ್ಲಿಸುವಂತೆ ನ್ಯಾಯಾಲಯ ಕಂಪನಿಗೆ ಆದೇಶಿಸಿರುವ ಬಗ್ಗೆ ತನ್ನ ಮಾಧ್ಯಮ ವಿಭಾಗಕ್ಕೆ ತಿಳಿದಿಲ್ಲ ಎಂದು ಪತಂಜಲಿ ನೀಡಿದ ಹೇಳಿಕೆಯನ್ನು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಗಂಭೀರವಾಗಿ ಪರಿಗಣಿಸಿತು.

ಪತಂಜಲಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಸಲ್ಲಿಸಿದ್ದ ಕ್ಷಮೆಯಾಚನಾ ಅಫಿಡವಿಟ್‌ನಲ್ಲಿ ಈ ಹೇಳಿಕೆ ನೀಡಿದ್ದರು.

ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಕೆಂಡಾಮಂಡಲವಾದ ನ್ಯಾಯಾಲಯ "ಇದು ಸಮರ್ಥನೀಯವಲ್ಲದಿದ್ದರೆ, ನೀವು ಕ್ಷಮೆಯಾಚಿಸಿಯೂ ಪ್ರಯೋಜನವಿಲ್ಲ. ಇದು ಸುಪ್ರೀಂ ಕೋರ್ಟ್‌ಗೆ ನೀಡಿದ ಭರವಸೆಯ ಸಂಪೂರ್ಣ ಉಲ್ಲಂಘನೆ. ಗಂಭೀರವಾದ ನಿಮ್ಮ ಕಾರ್ಯಕ್ಕೆ ನೀವು ಬದ್ಧರಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ (ಪತಂಜಲಿಯ) ಮಾಧ್ಯಮ ವಿಭಾಗಕ್ಕೆ ತಿಳಿದಿಲ್ಲ, ಅದೊಂದು ದ್ವೀಪದಂತೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದನ್ನು ಒಪ್ಪಲು ಆಗದು. ಇದು ಕೇವಲ ಬಾಯಿ ಉಪಚಾರದ ಮಾತು ! ನೀವು ಗಂಭೀರವಾದ ಮುಚ್ಚಳಿಕೆಯನ್ನು ಎಗ್ಗಿಲ್ಲದೆ ಉಲ್ಲಂಘಿಸಿದ್ದೀರಿ. ನಾವಿದನ್ನು ಒಪ್ಪಲು ಸಿದ್ಧವಿಲ್ಲ, ಈ ನಡೆ ತೋರಿಕೆಯದ್ದಾಗಿದೆ! ನಿಮ್ಮ ಕ್ಷಮೆಯಾಚನೆಯನ್ನು ನಾವು ಏಕಾದರೂ ಒಪ್ಪಬೇಕು?" ಎಂದು ನ್ಯಾಯಮೂರ್ತಿ ಕೊಹ್ಲಿ ಕೇಳಿದರು.

"ಇದೆಲ್ಲವೂ ಅಸಂಬದ್ಧವಾಗಿದೆ! ನೀವು 'ನ್ಯಾಯಾಲಯಕ್ಕೆ ಅನಿಸಿದರೆ, ಇತ್ಯಾದಿ' ಎಂದು ಅಫಿಡವಿಟ್‌ನಲ್ಲಿ ಹೇಳುತ್ತೀರಿ... ನಾವು ನಿಮ್ಮ ಹೃದಯವನ್ನು ನೋಡಲಾಗುವುದಿಲ್ಲ! ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಈ ರೀತಿ ವ್ಯವಹರಿಸಲಾಗುವುದಿಲ್ಲ. ಕೆಲವು ಪ್ರಕರಣಗಳಲ್ಲಿ, ಕೆಲವು ಸಂದರ್ಭಗಳನ್ನು ಅವುಗಳ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾಗುತ್ತದೆ. ಅಷ್ಟೊಂದು ಉದಾರತೆಯನ್ನು ತೋರಲಾಗದು!" ಎಂದು ನ್ಯಾಯಮೂರ್ತಿ ಅಮಾನುಲ್ಲಾ ಹೇಳಿದರು.

ವಚನಭ್ರಷ್ಟತೆಯ (ನ್ಯಾಯಾಲಯಕ್ಕೆ ಸುಳ್ಳು ಹೇಳುವುದು) ವಿಚಾರದಲ್ಲಿ ಪತಂಜಲಿ ಸಂಸ್ಥೆ ತಪ್ಪೆಸಗಿದೆ ಎಂದು ಪೀಠ ಹೇಳಿತು.

"ದಾಖಲೆಗಳನ್ನು ಲಗತ್ತಿಸಲಾಗಿದೆ ಎಂದು ನೀವು ಹೇಳಿದ್ದೀರಿ, ಆದರೆ ದಾಖಲೆಗಳನ್ನು ನಂತರ ಸೃಷ್ಟಿಸಲಾಗಿದೆ. ಇದು ವಚನ ಭ್ರಷ್ಟತೆಯ ಸ್ಪಷ್ಟ ಉದಾಹರಣೆ! ನಾವು ನಿಮ್ಮ ಮೇಲೆ ಗೂಬೆ ಕೂರಿಸುತ್ತಿಲ್ಲ, ಆದರೆ ನಾವು ಗಮನಿಸಿದ ಎಲ್ಲವನ್ನೂ ಹೇಳುತ್ತಿದ್ದೇವೆ" ಎಂದು ನ್ಯಾಯಮೂರ್ತಿ ಕೊಹ್ಲಿ ಹೇಳಿದರು.

ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ಪತಂಜಲಿಗೆ ಎಚ್ಚರಿಕೆ ನೀಡಿದ ಕೆಲ ದಿನಗಳ ಬಳಿಕ ನಂತರ ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್‌ ಅವರು ಪತ್ರಿಕಾಗೋಷ್ಠಿ ನಡೆಸಿದ ರೀತಿಯನ್ನು ಕೂಡ ಪೀಠ ಟೀಕಿಸಿತು.

ನ್ಯಾಯಾಲಯದ ಶಿಸ್ತುಕ್ರಮಗಳು ರಾಮದೇವ್ ಅವರಿಗೆ ಪಾಠವಾಗಲಿದೆ ಎಂಬ ಅವರ ಪರ ವಕೀಲರ ಪ್ರತಿಕ್ರಿಯೆಗೆ ನ್ಯಾಯಾಲಯ ತೃಪ್ತವಾಗಲಿಲ್ಲ.

"ನಾವು ಅವರಿಗೆ ಪಾಠ ಕಲಿಸಲು ಇಲ್ಲಿಲ್ಲ. (ಇದರೊಂದಿಗೆ) ಅವರಿಗೆ ಇರುವ ಗೌರವವನ್ನು ಸಾಮಾನ್ಯ ನಾಗರಿಕರಿಗೆ ಹೋಲಿಸಲಾಗುವುದಿಲ್ಲ. ತಾವು ಉತ್ತಮ ಸಂಶೋಧನೆ ಮಾಡಿರುವುದಾಗಿ ಅವರು ಹೇಳಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ನಾವು ಸಾಮಾನ್ಯವಾಗಿ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಹೆಚ್ಚು ಬೆಂಬತ್ತುವುದಿಲ್ಲ. ಕಾನೂನಿನ ಘನತೆಯನ್ನು ಅರಿತುಕೊಳ್ಳಲಿ ಎಂದು ಹೀಗೆ ಮಾಡಲಾಗುತ್ತಿದೆ. ಆದರೆ ಇದಕ್ಕೂ ಅಪವಾದಗಳಿದ್ದು ಬಹುಶಃ ನೀವು ಆ ಅಪವಾದದ ವ್ಯಾಪ್ತಿಗೆ ಬರುತ್ತೀರಿ" ಎಂದು ನ್ಯಾಯಾಲಯ ಕುಟುಕಿತು.

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ

ಮಾರ್ಚ್ 19ರಂದು ನ್ಯಾಯಾಲಯ ನೀಡಿದ ಆದೇಶದಂತೆ ರಾಮದೇವ್‌ ಮತ್ತು ಬಾಲಕೃಷ್ಣ ಇಬ್ಬರೂ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಅವರಿಗೆ ಖುದ್ದು ಹಾಜರಿಯಿಂದ ವಿನಾಯಿತಿ ಇಲ್ಲ. ಮುಂದಿನ ವಿಚಾರಣೆ ವೇಳೆಯೂ ಹಾಜರಿರಬೇಕಾಗುತ್ತದೆ ಎಂದು ನ್ಯಾಯಾಲಯ ಇಂದು ಸ್ಪಷ್ಟಪಡಿಸಿತು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 10 ರಂದು ನಡೆಯಲಿದ್ದು ಅಂದು ಕ್ಷಮೆಯಾಚನೆ ಕುರಿತು ಸೂಕ್ತ ಅಫಿಡವಿಟ್‌ ಸಲ್ಲಿಸುವಂತೆ ಪತಂಜಲಿ ಮತ್ತು ಅದರ ಆಡಳಿತ ಮಂಡಳಿಗೆ ಆದೇಶಿಸಲಾಯಿತು.

ಪತಂಜಲಿ ಜಾಹೀರಾತುಗಳ ವಿರುದ್ಧ ಕೇಂದ್ರ ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂದು ಕೂಡ ನ್ಯಾಯಾಲಯ ಇದೇ ವೇಳೆ ಪ್ರಶ್ನಿಸಿತು. ಜೊತೆಗೆ ನ್ಯಾಯಾಂಗ ನಿಂದನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಪತಂಜಲಿಗೆ ಅದು ಬುದ್ಧಿವಾದ ಹೇಳಿತು.

ಬಾಬಾ ರಾಮದೇವ್‌ ಪರ ಹಿರಿಯ ವಕೀಲ ಬಲ್ಬೀರ್ ಸಿಂಗ್, ಪತಂಜಲಿ ಪರ ಹಿರಿಯ ನ್ಯಾಯವಾದಿ ವಿಪಿನ್‌ ಸಾಂಘಿ, ಪತಂಜಲಿ ವಿರುದ್ಧ ಪ್ರಕರಣ ದಾಖಲಿಸಿದ್ದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪರವಾಗಿ ಹಿರಿಯ ವಕೀಲ ಪಿ ಎಸ್‌ ಪಟ್ವಾಲಿಯಾ, ಕೇಂದ್ರ ಸರ್ಕಾರದ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದರು.