ತೆಲಂಗಾಣ ವಿಧಾನಸಭೆಯಲ್ಲಿ ವಿರೋಧ ಪಕ್ಷವಾದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸದಸ್ಯರು ಆಡಳಿತಾರೂಢ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡರೂ ಉಪಚುನಾವಣೆ ಇರುವುದಿಲ್ಲ ಎಂದು ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ನಾಯಕ ಮತ್ತು ತೆಲಂಗಾಣ ಮುಖ್ಯಮಂತ್ರಿ (ಸಿಎಂ) ರೇವಂತ್ ರೆಡ್ಡಿ ಅವರನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
“ಇದನ್ನು ಸದನದಲ್ಲಿ ಹೇಳಿದ್ದರೆ ಮುಖ್ಯಮಂತ್ರಿಗಳು ಸಂವಿಧಾನದ ಹತ್ತನೇ ಶೆಡ್ಯೂಲ್ (ಪಕ್ಷಾಂತರ ನಿಷೇಧ ಕಾಯಿದೆಗೆ ಸಂಬಂಧಿಸಿದ್ದು) ಅಣಕಿಸುತ್ತಿದ್ದಾರೆ” ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಸಿಟ್ಟಾಯಿತು.
ಬಿಆರ್‌ಎಸ್ ಟಿಕೆಟ್ ಪಡೆದು ಚುನಾಯಿತರಾಗಿ ಬಳಿಕ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡ ತೆಲಂಗಾಣ ವಿಧಾನಸಭೆಯ ಸದಸ್ಯರಾದ (ಶಾಸಕರು) ವೆಂಕಟರಾವ್ ತೆಲ್ಲಂ, ಕಡಿಯಂ ಶ್ರೀಹರಿ ಮತ್ತು ದಾನಂ ನಾಗೇಂದರ್ ಅವರನ್ನು ಅನರ್ಹಗೊಳಿಸುವ ಅರ್ಜಿಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ತೆಲಂಗಾಣ ಹೈಕೋರ್ಟ್‌ನ ವಿಭಾಗೀಯ ಪೀಠ ಈ ಅನರ್ಹತೆ ಅರ್ಜಿಗಳನ್ನು ಸೂಕ್ತ ಸಮಯದೊಳಗೆ ನಿರ್ಧರಿಸುವಂತೆ ತೆಲಂಗಾಣ ವಿಧಾನಸಭೆಯ ಸ್ಪೀಕರ್‌ಗೆ ನವೆಂಬರ್ 2024ರಲ್ಲಿ ನಿರ್ದೇಶನ ನೀಡಿತ್ತು.
ಇದನ್ನು ಇಬ್ಬರು ಬಿಆರ್‌ಎಸ್ ಶಾಸಕರಾದ ಕುನ ಪಾಂಡು ವಿವೇಕಾನಂದ ಮತ್ತು ಪಾಡಿ ಕೌಶಿಕ್ ರೆಡ್ಡಿ - ಬಿಜೆಪಿ ಶಾಸಕ ಅಲ್ಲೆಟಿ ಮಹೇಶ್ವರ ರೆಡ್ಡಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸ್ಪೀಕರ್ ಪ್ರಕರಣದ ಬಗ್ಗೆ ಸಮಯ ಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಅರ್ಜಿದಾರರು ದೂರಿದ್ದರು.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಸಿ ಆರ್ಯಮನ್ ಸುಂದರಂ ಅವರು ಇಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹೇಳಿಕೆಯ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದರು.
"ಮಾರ್ಚ್ 26 ರಂದು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಸದಸ್ಯರಿಗೆ 'ನೀವು ಪಕ್ಷ ಬದಲಾಯಿಸಿದರೂ ಉಪಚುನಾವಣೆ ಇರುವುದಿಲ್ಲ ಎಂದು ಸ್ಪೀಕರ್ ಮೂಲಕ ನಾನು ನಿಮಗೆ ಭರವಸೆ ನೀಡುತ್ತೇನೆ' ಎಂದು ಹೇಳಿದರು ... ಇದು ವಿಧಾನಸಭೆಯ ಪ್ರಕ್ರಿಯೆ " ಎಂದು ಸುಂದರಂ ಆಕ್ಷೇಪಿಸಿದರು.
ಅಧಿಕೃತ ಪ್ರತಿವಾದಿಗಳ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ವಾದ ಮಂಡಿಸಿ, ಪ್ರಸ್ತುತ ಪ್ರಕರಣದಲ್ಲಿ ವಿಧಾನಸಭೆಯ ಕಲಾಪಗಳು ಪ್ರಶ್ನಾರ್ಹವಾಗಿಲ್ಲ ಎಂದು ಪ್ರತಿಪಾದಿಸಿದರು. ಈ ಪ್ರಕರಣದಲ್ಲಿ ತಾವು ಮುಖ್ಯಮಂತ್ರಿಯನ್ನು ಪ್ರತಿನಿಧಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆದರೆ, ಶಾಸಕಾಂಗದಲ್ಲಿ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ ಮುಖ್ಯಮಂತ್ರಿಯವರಿಗೆ ಎಚ್ಚರಿಕೆ ನೀಡಬೇಕೆಂದು ರೋಹಟ್ಗಿ ಅವರಿಗೆ ನ್ಯಾಯಮೂರ್ತಿ ಗವಾಯಿ ಸೂಚಿಸಿದರು.
ಶಾಸಕಾಂಗಗಳಲ್ಲಿ ನೀಡುವ ಹೇಳಿಕೆಗಳಿಗೆ ಪಾವಿತ್ರ್ಯತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. "ರಾಜಕಾರಣಿಗಳು ವಿಧಾನಸಭೆಯಲ್ಲಿ ಏನನ್ನಾದರೂ ಹೇಳಿದಾಗ, ಅದಕ್ಕೆ ಪಾವಿತ್ರ್ಯತೆ ಇರುತ್ತದೆ. ವಾಸ್ತವವಾಗಿ ನಾವು ಕಾಯಿದೆಗಳನ್ನು ವ್ಯಾಖ್ಯಾನಿಸುವಾಗ, ಸದನದಲ್ಲಿ ಮಾಡುವ ಭಾಷಣವನ್ನು ವ್ಯಾಖ್ಯಾನಕ್ಕಾಗಿ ಬಳಸಬಹುದು ಎಂದು ತೀರ್ಪುಗಳು ಹೇಳುತ್ತವೆ " ಎಂದು ಪೀಠ ಹೇಳಿದೆ.
ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರಿಗೆ ಜಾಮೀನು ನೀಡಿದ ಆದೇಶದ ಕುರಿತು ಈ ಹಿಂದೆ ಹೇಳಿಕೆ ನೀಡಿದ್ದ ಸಿಎಂ ರೇವಂತ್ ರೆಡ್ಡಿ ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದರು.
ಇಂದಿನ ವಿಚಾರಣೆಯ ಸಂದರ್ಭದಲ್ಲಿ ರೋಹಟ್ಗಿ ಅವರು, ಸಂವಿಧಾನದ 226 ನೇ ವಿಧಿಯ ಅಡಿಯಲ್ಲಿ ಹೈಕೋರ್ಟ್ ಅನರ್ಹತೆ ವಿಷಯಗಳಲ್ಲಿ ಸ್ಪೀಕರ್‌ಗೆ ಕಾಲಮಿತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಸ್ಪೀಕರ್ ಅವರನ್ನು ವಿನಂತಿಸಬಹುದು ಅಷ್ಟೇ ಎಂದು ಹೇಳಿದರು.
ಇದಕ್ಕೆ ಪೀಠವು ಅನರ್ಹತೆ ಅರ್ಜಿಗಳ ಕುರಿತು ನೋಟಿಸ್ ನೀಡುವಲ್ಲಿ ಸ್ಪೀಕರ್ ವಿಳಂಬ ಮಾಡಿದ್ದನ್ನು ಪ್ರಶ್ನಿಸಿತು. "ಸ್ಪೀಕರ್ 3-4 ವರ್ಷಗಳ ಕಾಲ ಅನರ್ಹತೆಯನ್ನು ನಿರ್ಧರಿಸದಿದ್ದರೂ ಸಹ, ಸುಪ್ರೀಂ ಕೋರ್ಟ್ ಸ್ಪೀಕರ್‌ಗೆ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂಬ ನಿಮ್ಮ ಹೇಳಿಕೆಯನ್ನು ನಾವು ದಾಖಲಿಸಬಹುದೇ?" ಎಂದು ಅದು ಕೇಳಿತು.