soldier, Supreme Court 
ಸುದ್ದಿಗಳು

ಅಂಗವೈಕಲ್ಯ ಪಿಂಚಣಿಗೆ ನಿರ್ಬಂಧ: ನಿವೃತ್ತ ಯೋಧನ ರಕ್ಷಣೆಗೆ ಧಾವಿಸಿದ ಸುಪ್ರೀಂ ಕೋರ್ಟ್

ಪಿಂಚಣಿಯನ್ನು ಕನಿಷ್ಠ 10 ವರ್ಷಗಳವರೆಗೆ ಪಾವತಿಸಬೇಕು ಎಂದು ಸೇನಾ ಪಿಂಚಣಿ ನಿಯಮಾವಳಿಗಳು ಗಮನಿಸಿದ ಸರ್ವೋಚ್ಚ ನ್ಯಾಯಾಲಯ ಯೋಧನಿಗೆ 10 ವರ್ಷಗಳವರೆಗೆ ಪಿಂಚಣಿ ಪಾವತಿಸುವಂತೆ ಸೂಚಿಸಿತು.

Bar & Bench

ಅಂಗವೈಕಲ್ಯಕ್ಕಾಗಿ ನೀಡಲಾಗುವ ಪಿಂಚಣಿಯನ್ನು ಮೊದಲ ಬಾರಿಗೆ ಕನಿಷ್ಠ 10 ವರ್ಷಗಳವರೆಗೆ ಪಾವತಿಸಬೇಕು ಎಂದು 1961ರ ಸೇನಾ ಪಿಂಚಣಿ ನಿಯಮಾವಳಿಗಳು ಸೂಚಿಸುವ ಹಿನ್ನೆಲೆಯಲ್ಲಿ ನಿವೃತ್ತ ಯೋಧನೊಬ್ಬನ ವಿಕಲಚೇತನ ಪಿಂಚಣಿಯನ್ನು 1 ವರ್ಷಕ್ಕೆ ಸೀಮಿತಗೊಳಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಈಚೆಗೆ ರದ್ದುಗೊಳಿಸಿದೆ [ನಿವೃತ್ತ ಲ್ಯಾನ್ಸ್‌ನಾಯಕ್‌ ರಜಪೂತ್‌ ಅಜಿತ್‌ ಸಿಂಗ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಹೀಗಾಗಿ ನಿವೃತ್ತ ಯೋಧನಿಗೆ ಪಿಂಚಣಿಯನ್ನು 10 ವರ್ಷಗಳವರೆಗೆ ಪಾವತಿಸಬೇಕು ಎಂದು ಸೆಪ್ಟೆಂಬರ್ 12ರಂದು ನೀಡಿದ ಆದೇಶದಲ್ಲಿ, ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ಸೂಚಿಸಿದೆ. ಪ್ರಕರಣದ ಸಂದರ್ಭ ಸನ್ನಿವೇಶಗಳನ್ನು ಗಮನಿಸಿದರೆ ಪಿಂಚಣಿಯನ್ನು ನಿರ್ಬಂಧಿಸುವ ನಿರ್ಧಾರ ತಾರ್ಕಿಕವಲ್ಲ ಎಂದು ಅದು ಹೇಳಿದೆ.

ಯೋಧ 'ಜೀವಕ್ಕೆ ಎರವಾಗುವಂತಹ' ಶಸ್ತ್ರಚಿಕಿತ್ಸೆಗೆ ಒಳಗಾಗದೆ ಇರಲು ನಿರ್ಧರಿಸಿದ್ದ. ಹಾಗಾಗಿ ಆತನ ಅಂಗವೈಕಲ್ಯತೆಯನ್ನು ಅತನ ಸೇನಾ ಸೇವೆಗೆ ಮಾತ್ರವೇ ಅನ್ವಯಿಸಲಾಗದು ಎಂದು ವೈದ್ಯಕೀಯ ಮಂಡಳಿಯೊಂದು ಅಭಿಪ್ರಾಯವ್ಯಕ್ತಪಡಿಸಿತ್ತು. ಅಲ್ಲದೆ, ಯೋಧನ ಸೇವಾ ದಾಖಲೆಗಳು ಆತ 'ಶಾಶ್ವತ ವೈಕಲ್ಯ'ಕ್ಕೆ ಒಳಗಾದ ಪರಿಣಾಮ ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು ಎಂದು ಹೇಳಿರುವುದನ್ನು ನ್ಯಾಯಾಲಯ ಗಮನಿಸಿತು.

"ಈ ಎಲ್ಲಾ ಅಂಶಗಳನ್ನು ಗಮನಿಸಿದರೆ, ಅಂಗವೈಕಲ್ಯ ಪಿಂಚಣಿ ಸೌಲಭ್ಯವನ್ನು ಒಂದು ವರ್ಷಕ್ಕೆ ಸೀಮಿತಗೊಳಿಸುವ ಸಶಸ್ತ್ರ ಪಡೆಗಳ ಮೇಲ್ಮನವಿ ನ್ಯಾಯಮಂಡಳಿಯ ನಿರ್ಧಾರ ತಾರ್ಕಿಕವಾಗಿ ಕಂಡುಬರುವುದಿಲ್ಲ. ನಿಯಮ 185ರಲ್ಲಿ (ಪಿಂಚಣಿ ನಿಯಮಾವಳಿ) ಸೂಚಿಸಲಾದ ಕಟ್ಟಳೆಯಿಂದ ಹೊರಗುಳಿಯಲು ನ್ಯಾಯಮಂಡಳಿ ಯಾವುದೇ ಕಾರಣಗಳನ್ನು ತಿಳಿಸಿಲ್ಲ ಇಲ್ಲವೇ ಯಾವುದೇ ಕಾರಣಗಳನ್ನು ನೀಡದಿರಲು ನಿರ್ಧರಿಸಿದೆ” ಎಂದು ನ್ಯಾಯಾಲಯ ತಿಳಿಸಿತು.

ಹದಿನೈದು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಲ್ಯಾನ್ಸ್ ನಾಯಕ್ ಶ್ರೇಣಿಯ ಯೋಧ 1987ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಹೃದಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಿಂಚಣಿಗೆ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದರು. ಅಂಗವೈಕಲ್ಯ ಚಿಕಿತ್ಸೆಯಡಿ ಬರುವ ಪ್ರಕರಣ ಇದಾಗಿದ್ದು, ಪಿಂಚಣಿಯ ಅರ್ಹತೆಗೊಳಪಡುತ್ತಿತ್ತು.

ಯೋಧ ಶೇ 100ರಷ್ಟು ಅಂಗವೈಕಲ್ಯ ಪಿಂಚಣಿಗೆ ಅರ್ಹರಾಗಿದ್ದರೂ ಒಂದು ವರ್ಷಕ್ಕಷ್ಟೇ ಪಿಂಚಣಿ ಪಾವತಿಸಬಹುದು ಎಂದು ವೈದ್ಯಕೀಯ ಮಂಡಳಿ ಹೇಳಿತ್ತು. ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಕೂಡ ಅಂಗವಿಕಲ ಪಿಂಚಣಿಗೆ ಅರ್ಹರಾಗಿದ್ದರೂ, ಅದನ್ನು ಕೇವಲ ಒಂದು ವರ್ಷಕ್ಕೆ ಮಾತ್ರ ನೀಡಬಹುದು ಎಂದು ತೀರ್ಪು ನೀತ್ತು. ಈ ಆದೇಶವನ್ನು ಯೋಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.