Mosque 
ಸುದ್ದಿಗಳು

ಮದರಸಾ ಕಾಯಿದೆ ಅಸಾಂವಿಧಾನಿಕ ಎಂದಿದ್ದ ಅಲಾಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ

Bar & Bench

ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯಿದೆ- 2004ಅನ್ನು ಅಸಾಂವಿಧಾನಿಕ ಎಂದು ರದ್ದುಗೊಳಿಸಿ ಅಲಹಾಬಾದ್‌ ಹೈಕೋರ್ಟ್‌ ಈಚೆಗೆ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ಹಿಡಿದಿದೆ [ಅಂಜುಮ್‌ ಕದರಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಮೇಲ್ನೋಟಕ್ಕೆ ಪ್ರಕರಣದ ಬಗ್ಗೆ ಹೈಕೋರ್ಟ್‌ ಅಭಿಪ್ರಾಯಗಳು ತಪ್ಪಾಗಿವೆ ಎಂದ ಭಾರತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ತೀರ್ಪಿಗೆ ತಡೆ ನೀಡಿತು.

ಮದರಾಸಾ ಮಂಡಳಿಯ ಉದ್ದೇಶ ಮತ್ತು ಗುರಿ ನಿಯಂತ್ರಕ ಸ್ವರೂಪದಲ್ಲಿದ್ದು ಮಂಡಳಿ ಸ್ಥಾಪನೆಯಿಂದ ಜಾತ್ಯತೀತತೆ ಉಲ್ಲಂಘನೆಯಾಗುತ್ತದೆ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿರುವುದು ಮೇಲ್ನೋಟಕ್ಕೆ ಸರಿಯಾಗಿಲ್ಲ. ಹೈಕೋರ್ಟ್‌ ತೀರ್ಪು ಮದರಸಾ ಶಿಕ್ಷಣವನ್ನು ಮಂಡಳಿಗೆ ವಹಿಸಲಾಗಿರುವ ನಿಯಂತ್ರಕ ಅಧಿಕಾರಗಳೊಂದಿಗೆ ಮಿಳಿತಗೊಳಿಸುತ್ತದೆ. ಆಕ್ಷೇಪಾರ್ಹ ತೀರ್ಪನ್ನು ತಡೆ ಹಿಡಿಯಲಾಗಿದೆ” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಮಧ್ಯಂತರ ಆದೇಶ ನೀಡುವಾಗ ಹೈಕೋರ್ಟ್‌ ಮದರಸಾ ಕಾಯಿದೆಯ ನಿಯಮಾವಳಿಗಳನ್ನು ತಪ್ಪಾಗಿ ಅರ್ಥೈಸಿಕೊಂಡಂತೆ ಇದೆ. ಏಕೆಂದರೆ ಅದು ಧಾರ್ಮಿಕ ಬೋಧನೆಗೆ ಮಾತ್ರ ಸೀಮಿತವಾಗಿಲ್ಲ. ಕಾಯಿದೆಯ ಉದ್ದೇಶ ಮತ್ತು ಸ್ವರೂಪವು ನಿಯಂತ್ರಕ ಸ್ವರೂಪದ್ದಾಗಿದೆ ಎಂದು ನ್ಯಾಯಾಲಯ ನುಡಿದಿದೆ.

ಮದರಸಾಗಳಲ್ಲಿ ಜಾತ್ಯತೀತ ಶಿಕ್ಷಣ ಒದಗಿಸುವಂತೆ ನೋಡಿಕೊಳ್ಳುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ (ಇದು ಕಾಯಿದೆಯ ಸಿಂಧುತ್ವ ಪ್ರಶ್ನಿಸಿತ್ತು) ಸಲ್ಲಿಸಲಾಗಿದ್ದರೂ ಮದರಸಾ ಕಾಯಿದೆ ರದ್ದುಗೊಳಿಸುವುದು ಪರಿಹಾರವಲ್ಲ ಎಂದು ನ್ಯಾಯಾಲಯ ಹೇಳಿತು.

ಪ್ರಭುತ್ವ ಎಲ್ಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ನೋಡಿಕೊಳ್ಳುವುದು ನ್ಯಾಯಸಮ್ಮತ ಸಾರ್ವಜನಿಕ ಹಿತಾಸಕ್ತಿಯಾಗಿದೆ. ಈ ಉದ್ದೇಶಕ್ಕಾಗಿ 2004ರ ಕಾಯಿದೆಯನ್ನು ತಿರಸ್ಕರಿಸುವ ಅಗತ್ಯವಿದೆಯೇ ಎಂಬುದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವಾಗಿದೆ ಎಂದು ಪೀಠ ನುಡಿಯಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ತೀರ್ಪನ್ನು ತಾನು ಒಪ್ಪುವುದಾಗಿ ರಾಜ್ಯ ಸರ್ಕಾರದ ವಾದವನ್ನು ನ್ಯಾಯಾಲಯ ದಾಖಲಿಸಿಕೊಂಡಿರುವುದು ಗಮನಾರ್ಹವಾಗಿದೆ.

ಪ್ರಕರಣದ ಬಗ್ಗೆ ಹೆಚ್ಚಿನ ಪರಿಗಣನೆ ಅವಶ್ಯಕವಾಗಿರುವುದರಿಂದ ತೀರ್ಪು ಜಾರಿಯಾಗದಂತೆ ಸುಪ್ರೀಂ ಕೋರ್ಟ್‌ ತಡೆ ನೀಡಿತು.