ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ರೇಖಾಚಿತ್ರ 
ಸುದ್ದಿಗಳು

ಬೋರ್ಡ್‌ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ: 5, 8, 9, 11ನೇ ತರಗತಿ ಫಲಿತಾಂಶ ಪ್ರಕಟವಿಲ್ಲ, ಪೋಷಕರಿಗೂ ತಿಳಿಸಬಾರದು

ರಾಜ್ಯ ಸರ್ಕಾರವು ಹೈಕೋರ್ಟ್‌ನ ಮುಂದೆ ಈ ಪರೀಕ್ಷೆಗಳನ್ನು ರೂಢಿಗತ ಕ್ರಮದಲ್ಲಿ "ಬೋರ್ಡ್‌ ಪರೀಕ್ಷೆ" ಎನ್ನಲಾಗದು, ಬದಲಿಗೆ ಅವು ಮೌಲ್ಯಾಂಕನ ಪರೀಕ್ಷೆಗಳು ಎಂದು ಹೇಳಿತ್ತು. ಇದನ್ನು ಒಪ್ಪಿದ್ದ ಹೈಕೋರ್ಟ್‌ ಅರ್ಜಿಗಳನ್ನು ವಜಾಗೊಳಿಸಿತ್ತು.

Bar & Bench

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ (KSEAB) ವ್ಯಾಪ್ತಿಗೊಳಪಡುವ ಶಾಲೆಗಳಲ್ಲಿ 5, 8, 9 ಮತ್ತು 11ನೇ ತರಗತಿಗಳಿಗೆ "ಬೋರ್ಡ್‌ ಪರೀಕ್ಷೆ" ನಡೆಸಲು ಅನುಮತಿಸಿದ್ದ ಹೈಕೋರ್ಟ್‌ ಆದೇಶಕ್ಕೆ ಸೋಮವಾರ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಕರ್ನಾಟಕ ಹೈಕೋರ್ಟ್‌ನ ಆದೇಶದನ್ವಯ 5, 8, 9, 11ನೇ ತರಗತಿಗಳಿಗೆ ನಡೆಸಲಾಗಿದ್ದ ಬೋರ್ಡ್‌ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸದಂತೆ ನ್ಯಾ. ಬೇಲಾ ಎಂ ತ್ರಿವೇದಿ ಮತ್ತು ನ್ಯಾ. ಪಂಕಜ್ ಮಿತ್ತಲ್‌ ಅವರಿದ್ದ ವಿಭಾಗೀಯ ಪೀಠವು ತಡೆ ನೀಡಿದೆ. ಪರೀಕ್ಷೆ ನಡೆಸಲು ಅನುಮತಿಸಿದ್ದ ಕರ್ನಾಟಕ ಹೈಕೋರ್ಟ್‌ ಮಾರ್ಚ್‌ 22ರ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ತನ್ನ ಅದೇಶದಲ್ಲಿ ಸುಪ್ರೀಂ ಕೋರ್ಟ್‌, "ಪ್ರತಿವಾದಿಯಾದ ರಾಜ್ಯ ಸರ್ಕಾರವು ವಿದ್ಯಾರ್ಥಿಗಳು, ಅವರ ಪೋಷಕರು, ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುವ ಹಾಗೂ ಅವರಿಗೆ ಮಾನಸಿಕವಾಗಿ ನೋವುಂಟು ಮಾಡಿ, ದೈಹಿಕವಾಗಿ ಕಷ್ಟಗಳಿಗೆ ಒಡ್ಡಲೇಬೇಕೆಂದು ನಿರ್ಧರಿಸಿರುವಂತೆ ತೋರುತ್ತಿದೆ... ವಿಭಾಗೀಯ ಪೀಠವು (ಹೈಕೋರ್ಟ್‌) ನೀಡಿರುವ ಆಕ್ಷೇಪಿತ ಆದೇಶವು ಸಹ ಶಿಕ್ಷಣದ ಹಕ್ಕಿನ ಅಡಿ ಬರುವ ನಿಯಮಗಳ ಅನುಸಾರವಾಗಿಯಾಗಲಿ ಅಥವಾ ಇತ್ಯರ್ಥ ಪಡಿಸಲಾಗಿರುವ ಶಾಸನಗಳ ಅನುಸಾರವಾಗಿಯಾಗಲಿ ಇಲ್ಲ," ಎಂದಿದೆ.

ಮುಂದುವರೆದು, "ಪ್ರಸಕ್ತ ಪರಿಸ್ಥಿತಿಯಲ್ಲಿ ಪ್ರತಿವಾದಿಗಳಿಗೆ ನೋಟಿಸ್ ನೀಡಲಾಗಿದ್ದು, 23.04.2024ರೊಳಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಲಾಗಿದೆ. ಆಕ್ಷೇಪಿತ ಅದೇಶವನ್ನು ಕಾರ್ಯಗತಗೊಳಿಸುವುದಕ್ಕೆ, ಜಾರಿಗೊಳಿಸುವುದಕ್ಕೆ ತಡೆ ನೀಡಲಾಗಿದೆ. ಮುಂದಿ ಆದೇಶದವರೆಗೆ ತಡೆ ಇರಲಿದೆ. ಒಂದೊಮ್ಮೆ ಯಾವುದೇ ಶಾಲೆಯಲ್ಲಿ ಫಲಿತಾಂಶವನ್ನು ಪ್ರಕಟಿಸಿದ್ದರೆ ಅದನ್ನು ತಡೆ ಹಿಡಿಯಲಾಗುತ್ತದೆ ಹಾಗೂ ಅದನ್ನು ಯಾವುದೇ ನಿರ್ದಿಷ್ಟ ಉದ್ದೇಶದ ಪರಿಗಣನೆಗೆ ಬಳಸಬಾರದು, ಅಷ್ಟೇ ಅಲ್ಲ ಫಲಿತಾಂಶವನ್ನು ಪೋಷಕರಿಗೂ ಸಹ ತಿಳಿಸಬಾರದು," ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್‌ 23ಕ್ಕೆ ನಡೆಯಲಿದೆ.

ರಾಜ್ಯದ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದ್ದ ರಾಜ್ಯ ಸರ್ಕಾರದ ಸುತ್ತೋಲೆಯನ್ನು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ರದ್ದುಪಡಿಸಿತ್ತು. ಏಕಸದಸ್ಯ ಪೀಠದ ಆದೇಶವನ್ನು ಬದಿಗೆ ಸರಿಸಲು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ರಾಜೇಶ್ ರೈ ಕೆ ಅವರ ನೇತೃತ್ವದ ಪೀಠವು ಮಾರ್ಚ್‌ 22 ಆದೇಶ ನೀಡಿ, ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸಿಂಧುಗೊಳಿಸಿತ್ತು.