CJI Bobde and KK Venugopal 
ಸುದ್ದಿಗಳು

ಪೊಕ್ಸೊ ಕಾಯಿದೆ ಕುರಿತಂತೆ ಬಾಂಬೆ ಹೈಕೋರ್ಟ್‌ ನೀಡಿದ್ದ ವಿವಾದಾತ್ಮಕ‌ ತೀರ್ಪಿಗೆ ಸುಪ್ರೀಂ ತಡೆ

12 ವರ್ಷದ ಬಾಲಕಿಯ ಬಟ್ಟೆ ತೆಗೆಯದೆ ಆಕೆಯ ಸ್ತನ ಸ್ಪರ್ಶಿಸಿದರೆ ಅದನ್ನು ಪೊಕ್ಸೊ ಕಾಯಿದೆಯಡಿ ಲೈಂಗಿಕ ದೌರ್ಜನ್ಯ ಎಂದು ವ್ಯಾಖ್ಯಾನಿಸಲಾಗದು ಎಂಬುದಾಗಿ ಬಾಂಬೆ ಹೈಕೋರ್ಟ್ ತೀರ್ಪು ನೀಡಿದ್ದು ಆತಂಕಕ್ಕೆ ಕಾರಣವಾಗಿತ್ತು.

Bar & Bench

12 ವರ್ಷದ ಬಾಲಕಿಯ ಬಟ್ಟೆ ತೆಗೆಯದೆ ಆಕೆಯ ಸ್ತನ ಮುಟ್ಟಿದರೆ ಅದನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ (ಪೊಕ್ಸೊ) ಸೆಕ್ಷನ್ 7ರ ಅಡಿ ಲೈಂಗಿಕ ದೌರ್ಜನ್ಯ ಎಂದು ವ್ಯಾಖ್ಯಾನಿಸಲಾಗದು ಎಂಬುದಾಗಿ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್‌ ತಡೆ ನೀಡಿದೆ.

ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು “ಇದು (ಬಾಂಬೆ ಹೈಕೋರ್ಟ್‌ನ) ಬಹಳ ಗೊಂದಲಮಯ ತೀರ್ಪು” ಎಂದು ನ್ಯಾಯಾಲಯಕ್ಕೆ ತಿಳಸಿದ ನಂತರ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿದ್ದ ಪೀಠ ತಡೆಯಾಜ್ಞೆ ನೀಡಿತು.

" ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹೊಂದಿರದ ಕಾರಣ ಪೊಕ್ಸೊ ಕಾಯಿದೆಯಡಿ ಲೈಂಗಿಕ ಉದ್ದೇಶ ಹೊಂದಿಲ್ಲ ಎಂದು ತಿಳಿಸಿ ಪೊಕ್ಸೊ ಕಾಯಿದೆಯ ಸೆಕ್ಷನ್‌ 8ರ ಅಡಿಯಲ್ಲಿ (ಲೈಂಗಿಕ ದೌರ್ಜನ್ಯದ ಶಿಕ್ಷೆ) ಆರೋಪಿತನಾದ ವ್ಯಕ್ತಿಯನ್ನು ಬಾಂಬೆ ಹೈಕೋರ್ಟ್‌ ಖುಲಾಸೆಗೊಳಿಸಿದೆ. (ಇಂತಹ) ಆಕ್ಷೇಪಾರ್ಹ ಆದೇಶ ಹಿಂದೆಂದೂ ಬಂದಿರಲಿಲ್ಲ ಮತ್ತು ಇದು ಅಪಾಯಕಾರಿ ಪೂರ್ವ ನಿದರ್ಶನವಾಗುವ ಸಾಧ್ಯತೆ ಇದೆ ಎಂದು ಅಟಾರ್ನಿ ಜನರಲ್‌ ತಿಳಿಸಿದ್ದಾರೆ. ಈ ಆದೇಶದ ವಿರುದ್ಧ ಅರ್ಜಿ ಸಲ್ಲಿಸಲು ನಾವು ಎ ಜಿ ವೇಣುಗೋಪಾಲ್‌ ಅವರಿಗೆ ಅನುಮತಿ ನೀಡುತ್ತಿದ್ದೇವೆ. ಇದೇ ವೇಳೆ ಪೊಕ್ಸೊ ಕಾಯಿದೆಯ ಸೆಕ್ಷನ್‌ 8ರ ಅಡಿಯಲ್ಲಿನ ಅಪರಾಧಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಖುಲಾಸೆಗೊಳಿಸಿರುವುದಕ್ಕೆ ತಡೆ ನೀಡುತ್ತಿದ್ದೇವೆ. ಎರಡು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಿ ಆರೋಪಿಗೆ ನೋಟಿಸ್‌ ನೀಡಿ” ಎಂದು ನ್ಯಾಯಾಲಯ ಆದೇಶಿಸಿದೆ.

ಮಹಿಳೆಯ ಘನತೆಗೆ ಧಕ್ಕೆ ತರುವುದನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ರ ವ್ಯಾಪ್ತಿಗೆ ಬರುತ್ತದೆ ಎಂದು ಬಾಂಬೆ ಹೈಕೋರ್ಟ್‌ ಜನವರಿ 19 ರಂದು ತೀರ್ಪು ನೀಡಿತ್ತು. ಪೊಕ್ಸೊ ಕಾಯಿದೆಯ ಸೆಕ್ಷನ್‌ 8ರ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದವರಿಗೆ 3ರಿಂದ 5 ವರ್ಷ ಶಿಕ್ಷೆ ವಿಧಿಸಬಹುದಾಗಿದ್ದರೆ ಐಪಿಸಿ ಸೆಕ್ಷನ್‌ 354 ರ ಅಡಿಯಲ್ಲಿ ಜೈಲು ಶಿಕ್ಷೆಯ ಅವಧಿ 1ರಿಂದ 5 ವರ್ಷಗಳು.

ತೀರ್ಪಿನ ಹಿಂದಿನ ತಾರ್ಕಿಕತೆಯನ್ನು ಕಾನೂನು ತಜ್ಞರು ಮತ್ತು ಜನ ಸಾಮಾನ್ಯರು ತೀವ್ರವಾಗಿ ಟೀಕಿಸಿದ್ದರು. ಇಂದು (ಬುಧವಾರ) ಬೆಳಿಗ್ಗೆ ಭಾರತೀಯ ಯುವ ವಕೀಲರ ಸಂಘ ಬಾಂಬೆ ಹೈಕೋರ್ಟ್‌ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.