ಕಮಲ್ ಹಾಸನ್ ಅಭಿನಯದ ಸಾಗರ ಸಂಗಮಂ ಮತ್ತು ಶಂಕರಾಭರಣಂ ನಂತಹ ಕ್ಲಾಸಿಕ್ ಚಿತ್ರಗಳು ಸೇರಿದಂತೆ ದಕ್ಷಿಣ ಭಾರತದ ಹಲವು ಪ್ರಮುಖ ಚಲನಚಿತ್ರಗಳ ಸಂಗೀತದ ಹಕ್ಕುಗಳ ಕುರಿತು ಸರೆಗಮ ಇಂಡಿಯಾ ಲಿಮಿಟೆಡ್ ವಿರುದ್ಧದ ನಿರ್ಬಂಧಕಾಜ್ಞೆಯ ಕೋರಿಕೆಯನ್ನು ಮರಳಿ ಮುನ್ನೆಲೆಗೆ ತಂದಿರುವ ನ್ಯಾಯಾಲಯದ ಆದೇಶವೊಂದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ [ಸರೆಗಮ Vs ಶ್ರೀದೇವಿ ವಿಡಿಯೋ ಕಾರ್ಪೊರೇಷನ್].
ಪ್ರಕರಣವು ಈ ಪ್ರಮುಖ ಚಿತ್ರಗಳ ಸಂಗೀತದ ಹಕ್ಕುಗಳ ಕುರಿತು ಶ್ರೀದೇವಿ ವಿಡಿಯೋ ಕಾರ್ಪೊರೇಷನ್‌ನೊಂದಿಗೆ ಸರೆಗಮ ಹೊಂದಿರುವ ದೀರ್ಘಾವಧಿಯ ಹಕ್ಕುಸ್ವಾಮ್ಯ ವಿವಾದಕ್ಕೆ ಸಂಬಂಧಿಸಿದ್ದಾಗಿದೆ.
ವಿವಾದವು ಏಳು ಚಲನಚಿತ್ರಗಳ ಧ್ವನಿಮುದ್ರಿಕೆಗಳಲ್ಲಿ ಆಡಿಯೋ ಹಕ್ಕುಸ್ವಾಮ್ಯದ ಕುರಿತದ್ದಾಗಿದೆ. ಸಾಲಂಗೈ ಒಲಿ, ಸಾಗರ ಸಂಗಮಂ (ತೆಲುಗು), ಶಂಕರಾಭರಣಂ, ಸೀತಾ ಕೋಕಿಲ ಚಿಲುಕಾ, ಸಿತಾರಾ, ಸಾಗರ ಸಂಗಮಂ (ಮಲಯಾಳಂ) ಮತ್ತು ತಾಯರಮ್ಮ ಬಂಗಾರಯ್ಯ ಚಿತ್ರಗಳ ಆಡಿಯೋ ಹಕ್ಕುಗಳು ವಿವಾದದ ಕೇಂದ್ರದಲ್ಲಿವೆ.
ನ್ಯಾಯಮೂರ್ತಿಗಳಾದ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಕೆಲವು ಸೀಮಿತ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಪ್ರಕರಣವನ್ನು ಮರಳಿ ಮುನ್ನೆಲೆಗೆ ತಂದಿರುವ ಮದ್ರಾಸ್ ಹೈಕೋರ್ಟ್ ನವೆಂಬರ್ 2025 ರ ಆದೇಶಕ್ಕೆ ಈಚೆಗೆ ತಡೆ ನೀಡಿದೆ.
ಪೂರ್ಣೋದಯ ಮೂವಿ ಕ್ರಿಯೇಷನ್ಸ್ ಮತ್ತು ಪೂರ್ಣೋದಯ ಆರ್ಟ್ ಕ್ರಿಯೇಷನ್ಸ್ ಜೊತೆ ಜುಲೈ 2008 ರಲ್ಲಿ ಮಾಡಿಕೊಂಡ ಎರಡು ಒಪ್ಪಂದಗಳ ಆಧಾರದ ಮೇಲೆ, ಏಳು ಚಲನಚಿತ್ರಗಳ ಧ್ವನಿ ರೆಕಾರ್ಡಿಂಗ್‌ಗಳ ಆಡಿಯೋ ಹಕ್ಕುಸ್ವಾಮ್ಯಗಳ ಸಂಪೂರ್ಣ ಮಾಲೀಕತ್ವವನ್ನು ತಾನು ಹೊಂದಿದ್ದೇನೆ ಎಂದು ಘೋಷಿಸಬೇಕೆಂದು ಶ್ರೀದೇವಿ ವಿಡಿಯೋ ಕಾರ್ಪೊರೇಷನ್ 2014 ರಲ್ಲಿ ವಾಣಿಜ್ಯ ಮೊಕದ್ದಮೆ ಹೂಡಿತ್ತು. ಸರೆಗಮ ಈ ರೆಕಾರ್ಡಿಂಗ್‌ಗಳನ್ನು ಬಳಸಿಕೊಳ್ಳದಂತೆ ಶಾಶ್ವತ ನಿರ್ಬಂಧವನ್ನೂ ಸಹ ಅದು ಕೋರಿತ್ತು.
ಈ ಮೊಕದ್ದಮೆಯನ್ನು ವಿರೋಧಿಸಿದ್ದ ಸರೆಗಮ, ಹಕ್ಕುಸ್ವಾಮ್ಯಗಳನ್ನು ಈಗಾಗಲೇ ದಶಕಗಳ ಹಿಂದೆಯೇ ಕೊಡಮಾಡಲಾಗಿದೆ ಎಂದು ವಾದಿಸಿತ್ತು. ಕಂಪನಿಯ ಪ್ರಕಾರ, 1978 ಮತ್ತು 1979 ರಲ್ಲಿ ಮಾಡಿಕೊಳ್ಳಲಾದ ಒಪ್ಪಂದಗಳು ಚಲನಚಿತ್ರಗಳ ರೆಕಾರ್ಡಿಂಗ್ ಮತ್ತು ಯಾಂತ್ರಿಕ ಮರುಪ್ರಸ್ತುತಿಯ ಹಕ್ಕುಗಳನ್ನು 60 ವರ್ಷಗಳ ಕಾಲ ಸೀ ರೆಕಾರ್ಡ್ಸ್‌ಗೆ ವರ್ಗಾಯಿಸಲ್ಪಟ್ಟಿವೆ. ಆ ಹಕ್ಕುಗಳನ್ನು ನಂತರ 2000ನೇ ಇಸವಿಯಲ್ಲಿ ಸರೆಗಮ (ಆಗ ಗ್ರಾಮಫೋನ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್) ಸಂಸ್ಥೆಯು ಶಾಶ್ವತವಾಗಿ ₹1.10 ಕೋಟಿಗೆ ಪಡೆದಿದೆ ಎಂದು ವಾದಿಸಿತ್ತು.
ಶ್ರೀದೇವಿ ವಿಡಿಯೋ ಕಾರ್ಪೊರೇಷನ್‌ನ ಹಕ್ಕುಸ್ವಾಮ್ಯ ಮೊಕದ್ದಮೆಯನ್ನು 2022ರಲ್ಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠ ವಜಾಗೊಳಿಸಿತ್ತು. ಹಕ್ಕುಸ್ವಾಮ್ಯ ಮಾಲೀಕತ್ವವನ್ನು ಕೋರುವ ಹಕ್ಕು ನಿರ್ದಿಷ್ಟ ಕಾಲಮಿತಿಗೊಳಪಟ್ಟಿರುತ್ತದೆ. ಹಕ್ಕುಸ್ವಾಮ್ಯದ ಕೋರಿಕೆಯ ಮಂಡನೆಯನ್ನು ಮಾಡುವುದೇ ಆಗಿದ್ದಲ್ಲಿ 2010 ರಲ್ಲಿ ಮಾಡಬೇಕಿತ್ತು, ಆದರೆ ಅದಕ್ಕೆ ಸಂಬಂಧಿಸಿದ ದಾವೆಯನ್ನು 2014ರಲ್ಲಿ ಹೂಡಲಾಗಿದೆ. ಇದು ಮೂರು ವರ್ಷಗಳ ಕಾಲಮಿತಿ ಅವಧಿಯನ್ನು ಮೀರಿದೆ ಎಂದು ತೀರ್ಪು ನೀಡಿತ್ತು.
ಈ ತೀರ್ಪಿನ ವಿರುದ್ಧ ಶ್ರೀದೇವಿ ವಿಡಿಯೋ ಕಾರ್ಪೊರೇಷನ್ ಸಲ್ಲಿಸಿದ್ದ ಮೇಲ್ಮನವಿಯಲ್ಲಿ, ಧ್ವನಿ ರೆಕಾರ್ಡಿಂಗ್‌ಗಳ ಮೇಲಿನ ಹಕ್ಕು ಸಮಯ ಮಿತಿಯನ್ನು ಹೊಂದಿದೆ ಎಂದು ವಿಭಾಗೀಯ ಪೀಠ ಒಪ್ಪಿಕೊಂಡಿತು. ಆದರೆ, ಸರೆಗಮದ ವಿರುದ್ಧದ ನಿರ್ಬಂಧ ಕೋರಿಕೆಗೆ ಸೀಮಿತವಾಗಿ ಕಾನೂನು ಪರಿಹಾರಗಳನ್ನು ಮುಂದುವರಿಸುವ ಅವಕಾಶವನ್ನು ಮುಕ್ತವಾಗಿರಿಸಿತು. ಇದು ದಾವೆಗೆ ಮರುಜೀವ ನೀಡಿತು.
ವಿಭಾಗೀಯ ಪೀಠದ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಸರೆಗಮ ಸಂಸ್ಥೆಯು, ವಿಭಾಗೀಯ ಪೀಠವು ನಿರ್ಬಂಧದ ಕೋರಿಕೆಯನ್ನು ಅರ್ಜಿದಾರರು ಕೋರಿದ್ದ ಪರಿಹಾರದಿಂದ ಬೇರ್ಪಡಿಸುವ ಮೂಲಕ ಮೂಲಭೂತವಾದ ಕಾನೂನು ದೋಷವನ್ನು ಮಾಡಿದೆ ಎಂದು ವಾದಿಸಿತು. ಈ ಮೊಕದ್ದಮೆ ಮೂಲಭೂತವಾಗಿ ಶೀರ್ಷಿಕೆ ಹಕ್ಕುಸ್ವಾಮ್ಯ ಮಾಲೀಕತ್ವದ ಕುರಿತಾದ ವಿವಾದವಾಗಿದೆ. ಒಮ್ಮೆ ಮಾಲೀಕತ್ವಕ್ಕೆ ಸಂಬಂಧಿಸಿದ ಪ್ರಕರಣವನ್ನು ಕಾಲಮಿತಿಯ ಕಾರಣಕ್ಕೆ ತಿರಸ್ಕರಿಸಿದ ನಂತರ ನಿರ್ಬಂದ ಕೋರಿಕೆ ಮುಂದುವರಿಸಲು ಅನುಮತಿಸಲಾಗದು. ಇದು ಶೀರ್ಷಿಕೆಯ ಮೇಲಿನ ಹಕ್ಕು ಸ್ಥಾಪನೆಯ ಕುರಿತ ಪ್ರಕರಣದ ಮೇಲೆ ಅವಲಂಬಿತವಾದ ಪರಿಹಾರವಾಗಿತ್ತೇ ಹೊರತು ಪ್ರತ್ಯೇಕ ಪ್ರಕರಣವಲ್ಲ ಎಂದು ಪ್ರತಿಪಾದಿಸಿತು.
ಸುಪ್ರೀಂ ಕೋರ್ಟ್ ಪ್ರಸ್ತುತ ಸರೆಗಮದ ವಿರುದ್ಧ ನಿರ್ಬಂಧವನ್ನು ಕೋರಿರುವ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ, ಆ ಮೂಲಕ ಮುಂದಿನ ವಿಚಾರಣೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಿದೆ. ಪ್ರಕರಣದ ವಿಚಾರಣೆಯನ್ನು 2026ರ ಏಪ್ರಿಲ್‌ಗೆ ಮುಂದೂಡಿದೆ.