ವಕೀಲರೂ ಆಗಿರುವ ತನ್ನ ಸಹೋದರ ದುರ್ನಡತೆ ತೋರಿದ್ದಾರೆ ಎಂದು ಆರೋಪಿಸಿ ಅಸ್ಪಷ್ಟ ದೂರು ದಾಖಲಿಸಿದ್ದ ವಕೀಲೆಯೊಬ್ಬರಿಗೆ ರೂ 50,000 ರೂಪಾಯಿ ದಂಡ ವಿಧಿಸಿದ್ದ ಭಾರತೀಯ ವಕೀಲರ ಪರಿಷತ್ (ಬಿಸಿಐ) ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಈಚೆಗೆ ತಡೆ ನೀಡಿದೆ [ಶಮಿನಾ ಎಚ್ ನಾಸಿಕ್‌ವಾಲಾ ಮತ್ತು ಸುಫಿಯಾನ್ ಮೊಹಮ್ಮದ್ ಉಮರ್ ಲಾಕ್ಡ್‌ವಾಲಾ ನಡುವಣ ಪ್ರಕರಣ].
ವಿಶೇಷವೆಂದರೆ, ದಂಡ ಪಾವತಿಸಲು ವಿಫಲವಾದರೆ ದೂರುದಾರ-ವಕೀಲೆಯ ಪರವಾನಗಿಯನ್ನು ಆರು ತಿಂಗಳವರೆಗೆ ಅಮಾನತುಗೊಳಿಸಲಾಗುವುದು ಎಂದು ಬಿಸಿಐ ಎಚ್ಚರಿಸಿತ್ತು.
ಈ ಹಿನ್ನೆಲೆಯಲ್ಲಿ ವಕೀಲೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ನ್ಯಾಯಪೀಠವು ಜನವರಿ 25 ರಂದು ಬಿಸಿಐ ಆದೇಶದ ಈ ಅಂಶವನ್ನು ತಡೆ ಹಿಡಿದಿದೆ.
"ಭಾರತೀಯ ವಕೀಲರ ಪರಿಷತ್‌ನ ಶಿಸ್ತು ಸಮಿತಿ ದೂರುದಾರೆಯ ಅರ್ಜಿಯನ್ನು ವಜಾಗೊಳಿಸಿ ರೂ 50,000 ದಂಡ ವಿಧಿಸಿದ್ದು ದಂಡದ ಮೊತ್ತ ಪಾವತಿಸದಿದ್ದರೆ ಮೇಲ್ಮನವಿದಾರರ ಪರವಾನಗಿಯನ್ನು ಆರು ತಿಂಗಳವರೆಗೆ ಅಮಾನತುಗೊಳಿಸಲಾಗುವುದು ಎಂದು ಅತಿ ಕಠಿಣ ಆದೇಶ ಹೊರಡಿಸಿದೆ. ಪ್ರಶ್ನಿಸಲಾಗಿರುವ ಆದೇಶದಲ್ಲಿ ದಂಡ ವಿಧಿಸಿದ ಮತ್ತು ದಂಡದ ಮೊತ್ತ ಠೇವಣೆ ಇಡದಿದ್ದರೆ ಎದುರಿಸಬೇಕಾದ ಪರಿಣಾಮಗಳನ್ನು ಹೇಳಿದ್ದ ಆದೇಶದ ಭಾಗವನ್ನು ಮಾತ್ರ ನಾವು ತಡೆ ಹಿಡಿಯುತ್ತಿದ್ದೇವೆ" ಎಂದು ಪೀಠ ಹೇಳಿದೆ.
ಆದಾಗ್ಯೂ, ದೂರನ್ನು ವಜಾಗೊಳಿಸುವ ವಿಚಾರದಲ್ಲಿ ತಾನು ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಬಿಸಿಐಯನ್ನು ಪ್ರಕರಣದಲ್ಲಿ ಪಕ್ಷಕಕಾರನನ್ನಾಗಿ ಮಾಡಿರುವ ಸುಪ್ರೀಂ ಕೋರ್ಟ್ ಅದರ ಪ್ರತಿಕ್ರಿಯೆ ಕೇಳಿದ್ದು ಪ್ರಕರಣವನ್ನು ಮಾರ್ಚ್ 15ಕ್ಕೆ ಮುಂದೂಡಲಾಗಿದೆ.
ಅವಹೇಳನಕಾರಿ ಇಮೇಲ್ಗಳನ್ನು ಬರೆಯುವ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮೇಲ್ಮನವಿದಾರ-ವಕೀಲೆ ಬಿಸಿಐ ಮುಂದೆ ತನ್ನ ಸಹೋದರನ ವಿರುದ್ಧ ದೂರು ನೀಡಿದ್ದರು.
ವಕೀಲರ ಕಾಯಿದೆಯ ನಿರ್ವಹಿಸಲು ಸಾಧ್ಯವಾಗದ ಕಾರಣ ಬಿಸಿಐನ ಶಿಸ್ತು ಸಮಿತಿ ಕಳೆದ ನವೆಂಬರ್‌ನಲ್ಲಿ ದೂರನ್ನು ವಜಾಗೊಳಿಸಿತ್ತು.
ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಸಂಘದ ಕಲ್ಯಾಣ ನಿಧಿಗೆ ರೂ 50,000 ಠೇವಣಿ ಇಡುವಂತೆ ಬಿಸಿಐ ಸಮಿತಿಯು ದೂರುದಾರರಿಗೆ ನಿರ್ದೇಶನ ನೀಡಿದೆ. ಈ ಮೊತ್ತ ಪಾವತಿಸಲು ವಿಫಲವಾದರೆ ವಕೀಲರ ಪರವಾನಗಿಯನ್ನು ಆರು ತಿಂಗಳವರೆಗೆ ಅಮಾನತುಗೊಳಿಸಲಾಗುವುದು ಎಂದು ಬಿಸಿಐ ಹೇಳಿದೆ.
ದಂಡ ಪಾವತಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಈಗ ಬಿಸಿಸಿಐನ ಆದೇಶವನ್ನು ಸೀಮಿತ ಪ್ರಮಾಣದಲ್ಲಿ ತಡೆಹಿಡಿದಿದೆ. ಬಿಸಿಐ ಮಾತ್ರವಲ್ಲದೆ ಅದು ವಕೀಲೆಯ ಸಹೋದರನ ಪ್ರತಿಕ್ರಿಯೆಯನ್ನೂ ಕೇಳಿದೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]