ನ್ಯಾಯಾಲಯ ಕಲಾಪಗಳನ್ನು ತಪ್ಪಾಗಿ ವರದಿ ಮಾಡಿದ್ದ ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್‌ಪ್ರೆಸ್ ಹಾಗೂ ದಿವ್ಯ ಭಾಸ್ಕರ್ ಪತ್ರಿಕೆಗಳು ಹೊಸದಾಗಿ ಕ್ಷಮೆಯಾಚಿಸಬೇಕು ಎಂಬ ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ [ಬೆನೆಟ್ ಕೋಲ್ಮನ್ ಅಂಡ್ ಕೋ ಲಿಮಿಟೆಡ್ ಮತ್ತು ಗುಜರಾತ್ ಹೈಕೋರ್ಟ್ ರಿಜಿಸ್ಟ್ರಾರ್ ನಡುವಣ ಪ್ರಕರಣ]
ಮೇಲ್ಮನವಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ , ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಹೈಕೋರ್ಟ್ ಆದೇಶವನ್ನು ತಡೆಹಿಡಿಯಿತು.
ನ್ಯಾಯಾಲಯದ ಕಲಾಪಗಳ ತಪ್ಪಾದ ವರದಿಗಾಗಿ ಮೂರು ಪತ್ರಿಕೆಗಳು ಪ್ರಕಟಿಸಿದ್ದ ಕ್ಷಮೆಯಾಚನೆಯನ್ನು ಗುಜರಾತ್ ಹೈಕೋರ್ಟ್ ಸೆಪ್ಟೆಂಬರ್ 2ರಂದು ತಿರಸ್ಕರಿಸಿತ್ತು . ಆಗಸ್ಟ್ 23 ರಂದು ಮೂರು ಪತ್ರಿಕೆಗಳು ಪ್ರಕಟಿಸಿದ ಕ್ಷಮೆಯಾಚನೆಗಳು ಈ ಹಿಂದೆ ತಾನು ನಿರ್ದೇಶಿಸಿದ್ದಂತೆ ದೊಡ್ಡದಾಗಿ ಕಾಣುವಂತೆ ಕ್ಷಮೆಯಾಚನೆಯನ್ನು ದಪ್ಪ ಅಕ್ಷರಗಳಲ್ಲಿ ಪ್ರಕಟಿಸಿರಲಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಹೊಸದಾಗಿ ಕ್ಷಮೆಯಾಚನೆಗೆ ಸೆ. 5ರವರೆಗೆ ನ್ಯಾಯಾಲಯ ಗಡುವು ವಿಧಿಸಿತ್ತು. ಹೀಗಾಗಿ ಟೈಮ್ಸ್ ಆಫ್ ಇಂಡಿಯಾ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು.
ಅನುದಾನಿತ ಅಲ್ಪಸಂಖ್ಯಾತ ಸಂಸ್ಥೆಗಳ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯದ ಕಲಾಪದ ಬಗ್ಗೆ ಸುಳ್ಳು ಮತ್ತು ತಿರುಚಿದ ವರದಿ ಪ್ರಕಟಿಸಿದ್ದಕ್ಕೆ ವಿವರಣೆ ನೀಡುವಂತೆ ಸೂಚಿಸಿ ಮೂರು ಪತ್ರಿಕೆಗಳ ರಾಜ್ಯ ಸಂಪಾದಕರಿಗೆ ಹೈಕೋರ್ಟ್ ಆಗಸ್ಟ್ 13 ರಂದು ನೋಟಿಸ್ ನೀಡಿತ್ತು.
ಪತ್ರಿಕೆಗಳು ಬಳಿಕ ಅಫಿಡವಿಟ್ ಸಲ್ಲಿಸಿ ಕೋರಿದ್ದ ಕ್ಷಮೆಯಿಂದ ನ್ಯಾಯಾಲಯ ತೃಪ್ತವಾಗಿರಲಿಲ್ಲ. ಆದ್ದರಿಂದ ಪತ್ರಿಕೆಗಳಲ್ಲೇ ದೊಡ್ಡದಾಗಿ ಕ್ಷಮೆಯಾಚಿಸುವಂತೆ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್‌ವಾಲ್ ಅವರು ಆದೇಶಿಸಿದ್ದರು. ಆದರೆ ಕ್ಷಮೆಯಾಚನೆಯನ್ನು ಪ್ರಕಟಿಸಿರುವ ಗಾತ್ರ ಚಿಕ್ಕದಾಗಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಹಿರಿಯ ವಕೀಲ ದೇವದತ್ ಕಾಮತ್ ಮತ್ತು ವಕೀಲ ಆಶಿಶ್ ವರ್ಮಾ ಅವರು ಟೈಮ್ಸ್ ಆಫ್ ಇಂಡಿಯಾ ಪರ ಸುಪ್ರೀಂ ಕೋರ್ಟ್‌ಗೆ ಹಾಜರಾಗಿದ್ದರು. ನ್ಯಾಯವಾದಿ ತತಿನಿ ಬಸು ಅವರ ಮೂಲಕ ಮನವಿ ಸಲ್ಲಿಸಲಾಗಿತ್ತು.