Supreme Court  
ಸುದ್ದಿಗಳು

ಮಹಿಳಾ ಮೀಸಲಾತಿ: ಸ್ಥಳೀಯ ಸಂಸ್ಥೆ ಚುನಾವಣೆ ರದ್ದುಗೊಳಿಸಿದ ನಾಗಾಲ್ಯಾಂಡ್ ಸರ್ಕಾರದ ಕ್ರಮಕ್ಕೆ ಸುಪ್ರೀಂ ತಡೆ

ಮೀಸಲಾತಿಗೆ ಸಂಬಂಧಿಸಿದಂತೆ ತಾನು ಈ ಹಿಂದೆ ನೀಡಿದ್ದ ಆದೇಶಗಳನ್ನು ಧಿಕ್ಕರಿಸಲು ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ ಪೀಠ.

Bar & Bench

ಸರ್ವೋಚ್ಚ ನ್ಯಾಯಾಲಯ ಈ ಹಿಂದೆ ಕಡ್ಡಾಯಗೊಳಿಸಿದ್ದ ಶೇ. 33 ಮಹಿಳಾ ಮೀಸಲಾತಿ ಅನ್ವಯ ನಡೆಸಬೇಕಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ರದ್ದುಗೊಳಿಸಿರುವ ನಾಗಾಲ್ಯಾಂಡ್ ಸರ್ಕಾರದ ಕ್ರಮಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಈ ಸಂಬಂಧ ಹೂಡಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ರಾಜ್ಯದಲ್ಲಿ ಕೇಂದ್ರ ಅರೆಸೇನಾ ಪಡೆಗಳನ್ನು ನಿಯೋಜಿಸುವಂತೆ ಕೋರಿರುವ ಮೂಲ ಅರ್ಜಿದಾರರ ಪ್ರಾರ್ಥನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಉತ್ತರವನ್ನೂ ಕೇಳಲಾಗಿದೆ. ಏಪ್ರಿಲ್ 17 ರಂದು ನ್ಯಾಯಾಂಗ ನಿಂದನೆ ಮೊಕದ್ದಮೆಯ ವಿಚಾರಣೆ ನಡೆಯಲಿದೆ.

ಮೀಸಲಾತಿಗೆ ಸಂಬಂಧಿಸಿದಂತೆ ತಾನು ಈ ಹಿಂದೆ ನೀಡಿದ್ದ ಆದೇಶಗಳನ್ನು ದಿಕ್ಕರಿಸಲು ಅನುಮತಿ ನೀಡುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

“ಇದು ನ್ಯಾಯಾಂಗ ನಿಂದನೆ. ಅವರಿದನ್ನು ಹೇಗೆ ಮಾಡಲು ಸಾಧ್ಯ. ಅವರಿಗೆ ಹೇಳಿ ಇದು ಸಾಧ್ಯವಿಲ್ಲ ಎಂದು. ನಾವು ಇದಕ್ಕೆ ಅನುಮತಿ ನೀಡುವುದಿಲ್ಲ," ಎಂದು ನ್ಯಾಯಮೂರ್ತಿ ಕೌಲ್ ಅವರು ನಾಗಾಲ್ಯಾಂಡ್‌ ಪರ ವಕೀಲರಾದ ಕೆ ಎನಾಟೋಲಿ ಸೆಮಾ ಅವರಿಗೆ ತಿಳಿಸಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರು ನ್ಯಾಯಾಂಗ ನಿಂದನೆ ಅರ್ಜಿಯನ್ನು ಇಂದು ಪ್ರಸ್ತಾಪಿಸಿದ್ದರು. ನಾಗಾಲ್ಯಾಂಡ್ ಸರ್ಕಾರ [ಸ್ಥಳೀಯ ಸಂಸ್ಥೆ] ಚುನಾವಣೆಯನ್ನು ರದ್ದುಗೊಳಿಸಿದೆ, ನ್ಯಾಯಾಲಯದ ಕಾರಣಕ್ಕೆ ಇದನ್ನು ನಡೆಸುತ್ತಿದ್ದೇವೆ ಜನರ ಇಚ್ಛೆಗೆ ವಿರುದ್ಧವಾಗಿ ನಾವು ಹೋಗುವುದಿಲ್ಲ ಎಂದು ಸಿಎಂ ಹೇಳಿದ್ದರಿಂದ ಚುನಾವಣೆ ರದ್ದಾಗಿದೆ. 3 ಗುಂಪುಗಳು ವಿರೋಧಿಸುತ್ತಿವೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಒದಗಿಸುವ ಸಂವಿಧಾನದ ಭಾಗ IX-ಎ ಜಾರಿಯಾಗುವುದನ್ನು ತಪ್ಪಿಸುವಂತೆ ಸೆಪ್ಟಂಬರ್ 22, 2012 ರಂದು ನಾಗಾಲ್ಯಾಂಡ್‌ ರಾಜ್ಯ ವಿಧಾನಸಭೆ ಅಂಗೀಕರಿಸಿದ ನಿರ್ಣಯ ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ರೋಸ್ಮೆರಿ ಜುವಿಚು ಮತ್ತು ಪೀಪಲ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್ (PUCL) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ.