UB Group
UB Group 
ಸುದ್ದಿಗಳು

ಯುಬಿ ಹಾಗೂ ಮತ್ತಿತರ ಬಿಯರ್ ಕಂಪೆನಿಗಳಿಗೆ ವಿಧಿಸಿದ್ದ ₹873 ಕೋಟಿ ದಂಡಕ್ಕೆ ಸುಪ್ರೀಂ ಕೋರ್ಟ್‌ ತಡೆ

Bar & Bench

ಭಾರತದಲ್ಲಿ ಬಿಯರ್ ಉತ್ಪಾದನೆ ಮತ್ತು ಮಾರಾಟದಲ್ಲಿ ಮೇಲುಗೈ ಸಾಧಿಸಲು ಅನುಕೂಲವಾಗುಂತೆ ಅಕ್ರಮ ಹತೋಟಿ ಕೂಟದ (ಕಾರ್ಟಲೈಸೇಷನ್) ಮೂಲಕ ಹಿಡಿತ ಸಾಧಿಸಲು ಮುಂದಾದ ಆರೋಪದ ಹಿನ್ನೆಲೆಯಲ್ಲಿ ಯುನೈಟೆಡ್‌ ಬ್ರೀವರೀಸ್‌ ಮತ್ತು ಇತರೆ ಕಂಪೆನಿಗಳಿಗೆ ವಿಧಿಸಿದ್ದ ₹873 ಕೋಟಿ ದಂಡ ಎತ್ತಿ ಹಿಡಿದಿದ್ದ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯ ಮಂಡಳಿ (ಎನ್‌ಸಿಎಲ್‌ಎಟಿ) ಆದೇಶಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ [ಯುನೈಟೆಡ್‌ ಬ್ರೀವೆರೀಸ್‌ ಲಿಮಿಟೆಡ್‌ ವರ್ಸಸ್‌ ಭಾರತೀಯ ಸ್ಪರ್ಧಾ ಆಯೋಗ ಮತ್ತು ಇತರರು].

ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) 2021ರಲ್ಲಿ ವಿಧಿಸಿದ್ದ ದಂಡದ ಆದೇಶದಲ್ಲಿ ಮಧ್ಯಪ್ರವೇಶಿಸಲು ಎನ್‌ಸಿಎಲ್‌ಎಟಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ದೀಪಂಕರ್‌ ದತ್ತ ನೇತೃತ್ವದ ವಿಭಾಗೀಯ ಪೀಠವು ಮಧ್ಯಂತರ ಆದೇಶ ಮಾಡಿದೆ.

ಸಿಸಿಐ ಆದೇಶವನ್ನು 2022ರ ಡಿಸೆಂಬರ್‌ನಲ್ಲಿ ಎನ್‌ಸಿಎಲ್‌ಟಿ ಎತ್ತಿ ಹಿಡಿದಿದ್ದ ಆದೇಶವನ್ನು ಯುಬಿ, ಕಾರ್ಲ್ಸ್‌ಬರ್ಗ್‌ ಇಂಡಿಯಾ ಮತ್ತು ಅಖಿಲ ಭಾರತ ಬ್ರೀವರೀಸ್‌ ಸಂಸ್ಥೆ ಪ್ರಶ್ನಿಸಿದ್ದವು.

ಭಾರತದಲ್ಲಿ ಬಿಯರ್ ಉತ್ಪಾದನೆ, ಮಾರಾಟ, ಹಂಚಿಕೆಯಲ್ಲಿ ಮೇಲ್ಮನವಿದಾರ ಕಂಪೆನಿಗಳು ಅಕ್ರಮ ಹತೋಟಿ ಕೂಟದ ಮೂಲಕ ಮೇಲುಗೈ ಸಾಧಿಸಲು ಪ್ರಯತ್ನಿಸಿವೆ ಎಂದು ಕ್ರೌನ್‌ ಬಿಯರ್ಸ್ ಇಂಡಿಯಾ ಮತ್ತು ಎಸ್‌ಎಬಿ ಮಿಲ್ಲರ್‌ ಇಂಡಿಯಾ ಆರೋಪಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ಬೆನ್ನಿಗೆ ಸಿಸಿಐ ಸ್ವಯಂಪ್ರೇರಿತವಾಗಿ ಪ್ರಕರಣ ಪರಿಗಣಿಸಿ, ದಂಡ ವಿಧಿಸಿತ್ತು. ಇದನ್ನು ಎನ್‌ಸಿಎಲ್‌ಎಟಿ ಎತ್ತಿ ಹಿಡಿದಿತ್ತು. ಈ ಆದೇಶಕ್ಕೆ ಸದ್ಯ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.