A1
ಸುದ್ದಿಗಳು

ಕೋಕಾ ಕೋಲಾ, ಪೆಪ್ಸಿಕೋ ಬಾಟ್ಲಿಂಗ್ ಘಟಕಗಳಿಗೆ ₹ 25 ಕೋಟಿ ದಂಡ: ಎನ್‌ಜಿಟಿ ಆದೇಶಕ್ಕೆ ಸುಪ್ರೀಂ ತಡೆ

ಬಾಟ್ಲಿಂಗ್ ಘಟಕಗಳು ಸಲ್ಲಿಸಿದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ನ್ಯಾ. ಎಲ್ ನಾಗೇಶ್ವರ ರಾವ್ ನೇತೃತ್ವದ ಪೀಠ ನೋಟಿಸ್ ಜಾರಿಗೊಳಿಸಿತು.

Bar & Bench

ಉತ್ತರಪ್ರದೇಶದ ಕೋಕಾ ಕೋಲಾ ಮತ್ತು ಪೆಪ್ಸಿಕೋಗೆ ಸಂಬಂಧಿಸಿದ ಎರಡು ತಂಪು ಪಾನೀಯ ಬಾಟ್ಲಿಂಗ್‌ ಘಟಕಗಳಿಗೆ ಒಟ್ಟು ₹ 25 ಕೋಟಿ ಪರಿಸರ ಪರಿಹಾರ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತಡೆ ನೀಡಿದೆ [ಮೂನ್‌ ಬಿವರೇಜಸ್‌ ಲಿಮಿಟೆಡ್‌ ಮತ್ತಿತರರು ಹಾಗೂ ಸುಶೀಲ್‌ ಭಟ್‌ ಇನ್ನಿತರರ ನಡುವಣ ಪ್ರಕರಣ].

ಬಾಟ್ಲಿಂಗ್ ಘಟಕಗಳು ಸಲ್ಲಿಸಿದ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಬಿ ಆರ್‌ ಗವಾಯಿ ಹಾಗೂ ಎ ಎಸ್‌ ಬೋಪಣ್ಣ ಅವರಿದ್ದ ಪೀಠ ಎನ್‌ಜಿಟಿ ಆದೇಶಕ್ಕೆ ತಡೆ ನೀಡಿತು.

ಅಂತರ್ಜಲ ಅಕ್ರಮವಾಗಿ ಬಳಕೆ ಮಾಡಿದ್ದಕ್ಕೆ ಪರಿಹಾರವಾಗಿ ₹25 ಕೋಟಿ ದಂಡ ಪಾವತಿಸುವಂತೆ ಎರಡು ಬಾಟ್ಲಿಂಗ್ ಕಂಪೆನಿಗಳಾದ ಮೂನ್ ಬಿವರೇಜಸ್ (ಕೊಕೊ ಕೋಲಾ) ಮತ್ತು ವರುಣ್ ಬಿವರೇಜಸ್‌ಗೆ (ಪೆಪ್ಸಿಕೋ) ಎನ್‌ಜಿಟಿ ಅಧ್ಯಕ್ಷ ಆದರ್ಶ್‌ ಕುಮಾರ್‌ ಗೋಯಲ್‌ ನೇತೃತ್ವದ ನ್ಯಾಯಮಂಡಳಿ ಫೆಬ್ರವರಿ 2022ರಲ್ಲಿ ಆದೇಶ ನೀಡಿತ್ತು.

ಅಂತರ್ಜಲ ಮರುಪೂರಣಕ್ಕೆ ಸಂಬಂಧಿಸಿದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಇಲ್ಲದೆ ಕಾರ್ಯನಿರ್ವಹಿಸುವುದರಿಂದ ಕಂಪನಿಗಳ ಬಾಟ್ಲಿಂಗ್‌ ಘಟಕಗಳು ಕೇಂದ್ರೀಯ ಅಂತರ್ಜಲ ಪ್ರಾಧಿಕಾರದ (ಸಿಜಿಡಬ್ಲ್ಯೂಎ) ಪರಿಸರ ಕಾನೂನನ್ನು ಉಲ್ಲಂಘಿಸಿವೆ ಎಂದು ಎನ್‌ಜಿಟಿ ತೀರ್ಪು ನೀಡಿತ್ತು.