ಕಸ್ಟಡಿ ಸಾವಿನ ಪ್ರಕರಣಗಳಲ್ಲಿ ಜಾಮೀನು ಕೋರಿರುವ ಆರೋಪಿ ಪೊಲೀಸ್ ಅಧಿಕಾರಿಯಾಗಿದ್ದಾಗ ಪ್ರಕರಣ ನಿರ್ಧರಿಸಲು ಕಠಿಣ ಧೋರಣೆ ಅನುಸರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ [ಅಜಯ್ ಕುಮಾರ್ ಯಾದವ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಪೊಲೀಿಸರು ಸಾಮಾನ್ಯರಿಗಿಂತಲೂ ಹೆಚ್ಚಿನ ಪ್ರಭಾವ ಬೀರಬಹುದಾದ್ದರಿಂದ ಹೀಗೆ ಕಠಿಣವಾಗಿ ನಡೆದುಕೊಳ್ಳುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಪಿ.ವಿ.ಸಂಜಯ್ ಕುಮಾರ್ ಅವರಿದ್ದ ಪೀಠ ತಿಳಿಸಿತು.
"ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೊಂದಿರುವ ಒಟ್ಟಾರೆ ಪ್ರಭಾವವನ್ನು ಪರಿಗಣಿಸಿ ಜಾಮೀನು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಠಿಣ ನಿಲುವು ತಳೆಯಬೇಕು" ಎಂದು ನ್ಯಾಯಾಲಯ ಹೇಳಿದೆ.
ಕಸ್ಟಡಿ ಸಾವು ಗಂಭೀರ ಅಪರಾಧ ಎಂದ ನ್ಯಾಯಾಲಯ 2021ರಲ್ಲಿ ಅಂತಹ ಸಾವಿಗೆ ಕಾರಣವಾದ ಆರೋಪ ಹೊತ್ತ ಪೊಲೀಸ್ ಪೇದೆಗೆ ನೀಡಿದ್ದ ಜಾಮೀನು ರದ್ದುಗೊಳಿಸಿತು.
"ಸಾಮಾನ್ಯ ಸಂದರ್ಭಗಳಲ್ಲಿ, ಆರೋಪಿಗೆ ಜಾಮೀನು ನೀಡುವ ಆದೇಶ ಅಮಾನ್ಯಗೊಳಿಸಲು ಸಂವಿಧಾನದ 136ನೇ ವಿಧಿಯ ಅಡಿಯಲ್ಲಿ ಅಧಿಕಾರ ವ್ಯಾಪ್ತಿ ಬಳಸಬಾರದು ಎಂಬುದು ಸತ್ಯ. ಆದರೆ ಜಾಮೀನು ಪ್ರಶ್ನಿಸಿದ್ದ ಅರ್ಜಿಯೊಂದಿಗೆ ವ್ಯವಹರಿಸುವಾಗ, ಪೊಲೀಸ್ ಅಧಿಕಾರಿಗಳನ್ನು ಆರೋಪಿಗಳಾಗಿ ಹೆಸರಿಸುವ ಕಸ್ಟಡಿ ಸಾವಿನ ಪ್ರಕರಣದಲ್ಲಿ ಈ ಮಾನದಂಡ ಅನ್ವಯಿಸುವುದಿಲ್ಲ. ಇಂತಹ ಆಪಾದಿತ ಅಪರಾಧಗಳು ಘೋರ ಮತ್ತು ಗಂಭೀರ ಸ್ವರೂಪದ್ದಾಗಿವೆ" ಎಂದು ನ್ಯಾಯಾಲಯ ಹೇಳಿದೆ.
ದರೋಡೆ ಮಾಡಿದ ಅನುಮಾನದ ಮೇಲೆ ಫೆಬ್ರವರಿ 2021ರಲ್ಲಿ ಬಂಧಿತನಾಗಿದ್ದ ವ್ಯಕ್ತಿ ಪೊಲೀಸರ ವಶದಲ್ಲಿದ್ದಾಗ ಸಾವನ್ನಪ್ಪಿದ್ದ. ಪ್ರಕರಣದಲ್ಲಿ ಹತ್ತೊಂಬತ್ತು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಮೃತ ವ್ಯಕ್ತಿ ಸಾವನ್ನಪ್ಪಿದ ದಿನದಂದು ಬದಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯನ್ನು ಜಾಮೀನಿನ ಮೇಲೆ ಅಲಾಹಾಬಾದ್ ಹೈಕೋರ್ಟ್ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ಮೃತ ವ್ಯಕ್ತಿಯ ಸಹೋದರ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
ಪ್ರಕರಣವನ್ನು ಇನ್ನೂ ಸಿಬಿಐ ತನಿಖೆ ನಡೆಸುತ್ತಿದೆ ಎಂದು ಅರಿತ ನ್ಯಾಯಾಲಯ ಪೇದೆಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿದ್ದ ಮೇಲ್ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿತು.
ಕಸ್ಟಡಿ ಸಾವು ಸಂಭವಿಸಿದಾಗ ಪೇದೆ ತಾತ್ಕಾಲಿಕ ಬದಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದನಷ್ಟೇ ಎಂಬ ಆಧಾರದ ಮೇಲೆ ಹೈಕೋರ್ಟ್ ಆತನಿಗೆ ಜಾಮೀನು ನೀಡಿತ್ತು. ಆದರೆ ಸಾಕ್ಷ್ಯಾಧಾರಗಳ ಪ್ರಕಾರ ಆತನ ಪಾತ್ರ ಕೇವಲ ಪೊಲೀಸ್ ವಾಹನ ಚಾಲಕನಿಗೆ ಸೀಮಿತವಾಗಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಪೊಲೀಸ್ ಅಧಿಕಾರಿಗಳ ಪ್ರಭಾವ ಮತ್ತು ಅಪರಾಧದ ಗಂಭೀರತೆಯನ್ನು ಪರಿಗಣಿಸಿ ಈ ಪ್ರಕರಣದಲ್ಲಿ ಜಾಮೀನು ನೀಡುವಾಗ ಕಠಿಣ ವಿಧಾನ ಅನುಸರಿಸುವ ಅಗತ್ಯವಿತ್ತು ಎಂದು ಅದು ಅಭಿಪ್ರಾಯಪಟ್ಟಿದೆ. ಹೀಗಾಗಿ ಹೈಕೋರ್ಟ್ ಪ್ರಕರಣವನ್ನು ಸೂಕ್ತವಾಗಿ ನಿಭಾಯಿಸಿಲ್ಲ ಎಂದ ನ್ಯಾಯಾಲಯ ಪೇದೆಗೆ ನೀಡಿದ್ದ ಜಾಮೀನು ರದ್ದುಗೊಳಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]