Crime scene 
ಸುದ್ದಿಗಳು

ಬಲವಂತದ ಮಂಪರು ಪರೀಕ್ಷೆ: ಪಾಟ್ನಾ ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರೀಂ

ಆರೋಪಿಯ ಇಚ್ಛೆಗೆ ವಿರುದ್ಧವಾಗಿ ಮಂಪರು ಪರೀಕ್ಷೆಗೆ ಒಳಪಡಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಜಾಮೀನು ವಿಚಾರಣೆ ವೇಳೆಯೂ ಅದಕ್ಕೆ ಅನುಮತಿ ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ.

Bar & Bench

ಆರೋಪಿಗಳ ಒಪ್ಪಿಗೆಯಿಲ್ಲದೆ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡಿದ್ದ ಪಾಟ್ನಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ [ಅಮಲೇಶ್‌ ಕುಮಾರ್ ಮತ್ತು ಬಿಹಾರ ಸರ್ಕಾರ ನಡುವಣ ಪ್ರಕರಣ].

ಇಂತಹ ಬಲವಂತದ ತಂತ್ರಗಳು ಮೂಲಭೂತ ಹಕ್ಕುಗಳ ಹೃದಯವನ್ನೇ ಇರಿಯಲಿದ್ದು ಜಾಮೀನು ಹಂತದ ವಿಚಾರಣೆ ವೇಳೆಯೂ ಇದಕ್ಕೆ ಅನುಮತಿ ನೀಡಲಾಗದು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ಪೀಠ ನುಡಿದಿ

ಅರ್ಜಿದಾರ ಅಮಲೇಶ್ ಕುಮಾರ್ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ತನಿಖಾಧಿಕಾರಿಯ ಪ್ರಸ್ತಾಪವನ್ನು ಹೈಕೋರ್ಟ್ ಒಪ್ಪಿಕೊಂಡಿರುವುದು ತಪ್ಪು ಎಂದು ಅದು ತೀರ್ಪು ನೀಡಿದೆ.

ಹೀಗೆ ಮಾಡುವುದು ಸಂವಿಧಾನದ 20(3) ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಮತ್ತು ಸೆಲ್ವಿ ವರ್ಸಸ್ ಕರ್ನಾಟಕ ಸರ್ಕಾರ ನಡುವಣ ಪ್ರಕರಣದಲ್ಲಿ ರೂಪಿಸಿದ ಕಾನೂನಿಗೆ ವಿರುದ್ಧವಾಗಿದೆ ಎಂದು ಪೀಠ ಹೇಳಿದೆ.

ಆರೋಪಿಗಳ ಒಪ್ಪಿಗೆಯಿಲ್ಲದೆ ಅವರ ಮಂಪರು ಪರೀಕ್ಷೆಗೆ ಹೈಕೋರ್ಟ್‌ ಅನುಮತಿ ನೀಡಿರುವುದು ಅಸಾಂವಿಧಾನಿಕವಾಗಿದ್ದು ಜಾಮೀನು ಪ್ರಕ್ರಿಯೆಯಲ್ಲಿ ಅನುಮತಿಸಲು ಸಾಧ್ಯವಿಲ್ಲದ ತನಿಖಾ ಅಡ್ಡದಾರಿಯಾಗಿದೆ. ಜಾಮೀನು ನ್ಯಾಯಾಲಯ ಇಂತಹ ಆಕ್ರಮಣಕಾರಿ ಕಾರ್ಯವಿಧಾನಗಳಿಗೆ ಅವಕಾಶ ನೀಡುವ ಮೂಲಕ ತನ್ನನ್ನು "ಕಿರು ವಿಚಾರಣಾ ನ್ಯಾಯಾಲಯ" ಆಗಿ ಬದಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅದು ವಿವರಿಸಿದೆ.

ಆಗಸ್ಟ್‌ 2022ರಲ್ಲಿ ಆರೋಪಿ ಅಮಲೇಶ್‌ ಕುಮಾರ್‌ ಪತ್ನಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರ್‌ ಸೇರಿ ಎಲ್ಲಾ ಆರೋಪಿಗಳ ವಿರುದ್ಧ ಮಂಪರು ಪರೀಕ್ಷೆ ನಡೆಸಲು ಪೊಲೀಸರು ಮಂದಾಗಿದ್ದರು. ತನಿಖೆಯ ಹಿನ್ನೆಲೆಯಲ್ಲಿ ಹೈಕೋರ್ಟ್‌ ಕುಮಾರ್‌ ಮತ್ತಿತರರು ಜಾಮೀನು ಅರ್ಜಿಯನ್ನು ನವೆಂಬರ್ 2023 ರಲ್ಲಿ ಮುಂದೂಡಿತ್ತು. ಇದನ್ನು ಕುಮಾರ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

 ಮಂಪರು ಪರೀಕ್ಷೆಗಳು ಕೂಡ ತನ್ನಿಂತಾನೇ ಶಿಕ್ಷೆ ವಿಧಿಸಲು ಬೇಕಾದ ಸಾಕ್ಷಿಯಾಗುವುದಿಲ್ಲ. ಅದಾದ ನಂತರ ಪತ್ತೆಯಾಗುವ ಯಾವುದೇ ಪುರಾವೆಗಳನ್ನಾಗಲಿ ಸಾಕ್ಷ್ಯ ಕಾಯಿದೆಯ ಸೆಕ್ಷನ್ 27ರ ಪ್ರಕಾರ ಕಟ್ಟುನಿಟ್ಟಾದ ಕಾರ್ಯವಿಧಾನದ ಸುರಕ್ಷತೆಗಳನ್ನು ಪಾಲಿಸಿರಬೇಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಸ್ವಯಂಪ್ರೇರಿತವಾಗಿಯೂ ಮಂಪರು  ಪರೀಕ್ಷೆಗೆ ಒಳಗಾಗಲು ಯಾವುದೇ ನಿರಾಕರಿಸಲಾಗದ ಹಕ್ಕು ಇಲ್ಲ ಎಂದು ನ್ಯಾಯಾಲಯ ಹೇಳಿದೆ.   

ಆದ್ದರಿಂದ, ಹೈಕೋರ್ಟ್‌ನ ಮಧ್ಯಂತರ ಆದೇಶ ರದ್ದುಗೊಳಿಸಿದ ನ್ಯಾಯಾಲಯ, ಕುಮಾರ್ ಅವರ ಜಾಮೀನು ಅರ್ಜಿಯನ್ನು ಅರ್ಹತೆಯ ಆಧಾರದ ಮೇಲೆ ವಿಚಾರಣೆ ನಡೆಸುವಂತೆ ನಿರ್ದೇಶಿಸಿತು. ಪ್ರಕರಣದ ಅಮಿಕಸ್ ಕ್ಯೂರಿಯಾಗಿ  ಹಿರಿಯ ವಕೀಲ ಗೌರವ್ ಅಗರವಾಲ್  ಕೆಲಸ ಮಾಡಿದ್ದರು.  

[ತೀರ್ಪಿನ ಪ್ರತಿ]

Amlesh_Kumar_vs_State_of_Bihar_.pdf
Preview