ಕಳಂಕಿತ ನೇಮಕಾತಿಗಳನ್ನು ಮಾನ್ಯಗೊಳಿಸಿದ್ದ ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ಕಾಯಿದೆ, 2022 ಅನ್ನು ಸುಪ್ರೀಂ ಕೋರ್ಟ್ ಗುರುವಾರ ಅಸಾಂವಿಧಾನಿಕ ಎಂದು ಘೋಷಿಸಿದೆ. ಈ ಮೂಲಕ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳ ಹಿನ್ನೆಲೆಯಲ್ಲಿ ರದ್ದಾಗಿದ್ದ ಸುಮಾರು 191 ಅಭ್ಯರ್ಥಿಗಳ ನೇಮಕಾತಿಗಳಿಗೆ ಕಾನೂನಿನ ಮೂಲಕ ಮರುಜೀವ ನೀಡಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಹಿನ್ನಡೆಯಾಗಿದೆ.
ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಕೆ ವಿನೋದ್ ಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಸಾಂವಿಧಾನಿಕ ನ್ಯಾಯಾಲಯಗಳು ನೇಮಕಾತಿ ರದ್ದತಿ ನಿರ್ಧಾರವನ್ನು ಎತ್ತಿಹಿಡಿದಿದ್ದರೂ ಅದನ್ನು ಹೊಸ ಕಾನೂನಿನ ಮೂಲಕ ನಿಷ್ಪಲಗೊಳಿಸಲು ರಾಜ್ಯ ವಿಧಾನಮಂಡಲಕ್ಕೆ ಅಧಿಕಾರವಿಲ್ಲ ಎಂದು ಹೇಳಿದೆ.
2022ರ ಕಾಯಿದೆಯನ್ನು ರದ್ದುಪಡಿಸಿದ ನ್ಯಾಯಾಲಯವು, ಅದರ ಆಧಾರದಲ್ಲಿ ಮಾಡಲಾಗಿದ್ದ ನೇಮಕಾತಿಗಳೂ ರದ್ದಾಗಲಿವೆ ಎಂದು ಸ್ಪಷ್ಟಪಡಿಸಿದೆ.
“ಸಂಬಂಧಪಟ್ಟ ಶಾಸನವು ಅಸಂವಿಧಾನಿಕವಾಗಿದೆ ಎಂಬುದರ ಬಗ್ಗೆ ನಮಗೆ ಯಾವುದೇ ಸಂದೇಹವಿಲ್ಲ” ಎಂದು ಪೀಠ ಹೇಳಿದೆ.
ಎಸ್ ಶ್ರೀನಿವಾಸ ಟಿ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು, ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಅರ್ಜಿಗಳನ್ನು ನಿರ್ವಹಿಸಿದ ರೀತಿಯ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
“ಆಕ್ಷೇಪಿತ ತೀರ್ಪುಗಳನ್ನು ಗಮನಿಸಿದಾಗ ನಮಗೆ ಸ್ವಲ್ಪ ಆಶ್ಚರ್ಯ ಮತ್ತು ಅದಕ್ಕಿಂತಲೂ ಹೆಚ್ಚಿನ ಆತಂಕ ಉಂಟಾಗುತ್ತದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮೇಲ್ನೋಟಕ್ಕೆ ಪರಿಗಣಿಸಲಾಗಿತ್ತು. ನಂತರದ ರಿಟ್ ಅರ್ಜಿಯನ್ನೂ ಅದೇ ರೀತಿಯಲ್ಲಿ ನಿರ್ವಹಿಸಲಾಗಿದೆ. ಕಾನೂನಿನ ಪ್ರತಿಯೊಂದು ತತ್ವವನ್ನೂ ಗಾಳಿಗೆ ತೂರಿ, ಶಾಸನ ರಚನಾ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಯನ್ನು ಮೀರಿದ, ಅಸಂಬದ್ಧತೆಯ ಗಡಿಯನ್ನು ತಲುಪಿದ ಕಾಯಿದೆಯನ್ನು ಎತ್ತಿಹಿಡಿಯಲಾಗಿದೆ” ಎಂದು ಪೀಠ ಟೀಕಿಸಿದೆ.
2011ರ ನವೆಂಬರ್ 3ರಂದು ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಗ್ರೂಪ್ ಎ ಮತ್ತು ಬಿ ವೃಂದದ 362 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆದಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಅಭ್ಯರ್ಥಿಗಳು ಮತ್ತು ಆಯೋಗದ ಸದಸ್ಯರ ನಡುವಿನ ಸಂವಹನ, ಅಭ್ಯರ್ಥಿಗಳ ವೈಯಕ್ತಿಕ ಸಾಮರ್ಥ್ಯವನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡದೆ ಹಲವರಿಗೆ ಒಂದೇ ರೀತಿಯ ಸಂದರ್ಶನ ಅಂಕಗಳನ್ನು ನೀಡಿದ್ದು ಹಾಗೂ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಡಿಜಿಟಲ್ ವಿಡಿಯೊ ರೆಕಾರ್ಡರ್ ಬದಲಾಯಿಸಿದ ಆರೋಪಗಳು ತನಿಖೆಯಲ್ಲಿ ದಾಖಲಾಗಿದ್ದವು.
ನೇಮಕಾತಿ ರದ್ದುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆರಂಭದಲ್ಲಿ ರದ್ದುಗೊಳಿಸಿತ್ತು. ಆದರೆ, ಹೈಕೋರ್ಟ್ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿತ್ತು. ಬಳಿಕ ನೇಮಕಾತಿ ಪ್ರಕ್ರಿಯೆಯನ್ನು ಲಿಖಿತ ಪರೀಕ್ಷೆಯ ಫಲಿತಾಂಶದ ಹಂತದಿಂದ ಮುಂದುವರಿಸುವ ಪ್ರಯತ್ನವೂ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿನ ಗಂಭೀರ ಅಕ್ರಮಗಳ ಹಿನ್ನೆಲೆಯಲ್ಲಿ ವಿಫಲವಾಗಿತ್ತು.
ಇದರ ಹೊರತಾಗಿಯೂ, ರಾಜ್ಯ ಸರ್ಕಾರವು 2022ರಲ್ಲಿ ಹೊಸ ಕಾಯಿದೆ ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸಿತ್ತು. ಈ ಕಾಯಿದೆಯಡಿ 191 ಅಭ್ಯರ್ಥಿಗಳಿಗೆ ನೇಮಕಾತಿ ನೀಡಲಾಗಿತ್ತು. ಅವರಲ್ಲಿ 14 ಅಭ್ಯರ್ಥಿಗಳು ಸಿಐಡಿ ತನಿಖೆಯಲ್ಲಿ ಅಕ್ರಮಗಳೊಂದಿಗೆ ಸಂಬಂಧ ಹೊಂದಿರುವವರಾಗಿ ಗುರುತಿಸಲ್ಪಟ್ಟಿದ್ದರು.
2022ರ ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಆದೇಶವನ್ನು ಆಧರಿಸಿ ಕೆಎಟಿಯು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದ ವಿಫಲ ಅಭ್ಯರ್ಥಿಗಳಿಗೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತ್ತು. ನಂತರ ಕೆಎಟಿಯ ಆದೇಶವನ್ನು ಪ್ರಶ್ನಿಸಿದ ಅರ್ಜಿಯನ್ನೂ ಹೈಕೋರ್ಟ್ ತಿರಸ್ಕರಿಸಿತ್ತು.
ಈ ಬೆಳವಣಿಗೆಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ಪಿಐಎಲ್ ಸಲ್ಲಿಸಿದ್ದ ವ್ಯಕ್ತಿ ನಂತರದ ಕಾನೂನು ಸವಾಲನ್ನು ಸರಿಯಾಗಿ ಮುಂದುವರಿಸದಿರುವ ಬಗ್ಗೆ ಪ್ರಶ್ನಿಸಿತು. ಸಂಬಂಧವಿಲ್ಲದ ವ್ಯಕ್ತಿಯೊಬ್ಬರು ಕಾನೂನುಬದ್ಧ ಸವಾಲನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿರುವುದನ್ನು ವಿಚಾರಣಾ ಪ್ರಕ್ರಿಯೆ ತೋರಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರು ನ್ಯಾಯಾಲಯದ ಅನುಮತಿಯಿಲ್ಲದೆ ತಮಗೆ ಬೇಕಾದಂತೆ ಅರ್ಜಿಯನ್ನು ಹಿಂಪಡೆಯುವ ಹಕ್ಕು ಹೊಂದಿರುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ. ಅಲ್ಲದೆ, ಮೂಲ ಅರ್ಜಿದಾರರು ಭಾಗವಹಿಸದಿದ್ದರೂ ಗಂಭೀರ ಸಾಂವಿಧಾನಿಕ ಪ್ರಶ್ನೆಯನ್ನು ಪರಿಶೀಲಿಸುವ ಅಧಿಕಾರ ನ್ಯಾಯಾಲಯಕ್ಕಿದೆ ಎಂದು ಸ್ಪಷ್ಟಪಡಿಸಿದೆ.
ನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರವು ಕಾಲಕಾಲಕ್ಕೆ ತನ್ನ ನಿಲುವು ಬದಲಾಯಿಸಿರುವುದನ್ನೂ ಸುಪ್ರೀಂ ಕೋರ್ಟ್ ಟೀಕಿಸಿದೆ.
“ರಾಜಕೀಯದ ಗಾಳಿ ದಿಕ್ಕು ಬದಲಿಸಿದಾಗ, ಅದರ ಬಿರುಗಾಳಿಯಲ್ಲಿ ಸಿಲುಕುವುದು ಸಾಮಾನ್ಯ ಜನರು” ಎಂದು ಪೀಠ ಮಾರ್ಮಿಕವಾಗಿ ನುಡಿದಿದೆ.
2011ರಲ್ಲಿ ಆರಂಭವಾದ ನೇಮಕಾತಿ ಪ್ರಕ್ರಿಯೆ ಹಲವು ವರ್ಷಗಳಾದರೂ ಇತ್ಯರ್ಥವಾಗದ ಕಾರಣ, ಉದ್ಯೋಗಾಕಾಂಕ್ಷಿಗಳು ವಯೋಮಿತಿ ಮೀರುವ ಪರಿಸ್ಥಿತಿ ಎದುರಿಸಿದ್ದಾರೆ. ಮತ್ತೊಂದೆಡೆ, ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಉದ್ಯೋಗ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.
“ಬದಲಾಗುತ್ತಿರುವ ಕಾಲಘಟ್ಟದಲ್ಲಿ ರಾಜಕೀಯದ ಬಣ್ಣಗಳು ಬದಲಾದಂತೆ ರಾಜ್ಯ ಸರ್ಕಾರವೂ ತನ್ನ ನಿಲುವುಗಳನ್ನು ಬದಲಾಯಿಸುತ್ತಿರುವುದನ್ನು ನಾವು ಆರಂಭದಲ್ಲೇ ಟೀಕಿಸಿದ್ದೇವೆ” ಎಂದು ಪೀಠ ಹೇಳಿದೆ.
ನೇಮಕಾತಿ ಪಡೆದ ಅಭ್ಯರ್ಥಿಗಳ ಉದ್ಯೋಗವನ್ನು ಅನುಕಂಪದ ಆಧಾರದಲ್ಲಿ ರಕ್ಷಿಸಬೇಕು ಎಂಬ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದು ಕೇವಲ ಕಾರ್ಯವಿಧಾನದ ಲೋಪದಿಂದ ರದ್ದಾದ ನೇಮಕಾತಿಯಲ್ಲ; ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಿಂದ ಕಳಂಕಿತವಾಗಿದ್ದ ನೇಮಕಾತಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
“ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಅನುಕಂಪದ ಆಧಾರದ ಮೇಲೆ ಪರಿಹಾರ ನೀಡಲಾಗದು. ಸಾಂವಿಧಾನಿಕ ನ್ಯಾಯಾಲಯಗಳು ಕಳಂಕಿತ ಎಂದು ಘೋಷಿಸಿದ ನೇಮಕಾತಿಯ ಆಧಾರದ ಮೇಲೆ ಮತ್ತು ಅಸ್ತಿತ್ವದಲ್ಲೇ ಇರದಂತಿರುವ 2022ರ ಕಾಯಿದೆಯ ಮೂಲಕ ನೇಮಕಾತಿ ಮಾಡಲಾಗಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ತೀರ್ಪನ್ನು ನಿಷ್ಪಲಗೊಳಿಸುವ ಉದ್ದೇಶದಿಂದ ಹೊಸ ಕಾನೂನು ಜಾರಿಗೊಳಿಸುವುದು ಮತ್ತು ನ್ಯಾಯಾಲಯದ ತೀರ್ಪಿಗೆ ಆಧಾರವಾಗಿದ್ದ ಕಾನೂನು ಪರಿಸ್ಥಿತಿಯನ್ನು ಬದಲಿಸುವ ಉದ್ದೇಶದ ಪೂರ್ವಾನ್ವಯ ಶಾಸನ ರಚನೆ—ಇವೆರಡರ ನಡುವಿನ ವ್ಯತ್ಯಾಸವನ್ನೂ ಪೀಠ ವಿವರಿಸಿದೆ.
2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಗಳಿಗೆ ನ್ಯಾಯ ಒದಗಿಸುವ ಉನ್ನತ ಆದರ್ಶದೊಂದಿಗೆ ಕಾಯಿದೆ ರೂಪಿಸಲಾಗಿದೆ ಎಂಬ ಸಮರ್ಥನೆಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.
“ನೇಮಕಾತಿಯೇ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಿಂದ ಕಳಂಕಿತವಾಗಿದೆ ಎಂದು ಹೈಕೋರ್ಟ್ ತೀರ್ಮಾನಿಸಿದ್ದು, ಅದನ್ನು ಈ ನ್ಯಾಯಾಲಯವೂ ಸಿವಿಲ್ ಮೇಲ್ಮನವಿಯಲ್ಲಿ ಎತ್ತಿಹಿಡಿದಿದೆ. ಹೀಗಿರುವಾಗ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಗಳಿಗೆ ನ್ಯಾಯ ಒದಗಿಸುವ ಕಾಯಿದೆಯ ಉನ್ನತ ಆದರ್ಶವು ಅರ್ಥಹೀನವಾಗುತ್ತದೆ” ಎಂದು ಪೀಠ ಹೇಳಿದೆ.
ರದ್ದಾದ ನೇಮಕಾತಿಗೆ ಬದಲಾಗಿ ಹಳೆಯ ನಿಯಮಗಳ ಅಡಿಯಲ್ಲೇ ಹೊಸ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂಬ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಬದಲಿಗೆ, ಪ್ರಸ್ತುತ ಜಾರಿಯಲ್ಲಿರುವ ನೇಮಕಾತಿ ನಿಯಮಗಳ ಅಡಿಯಲ್ಲಿ ಖಾಲಿ ಇರುವ ಗ್ರೂಪ್ ಎ ಮತ್ತು ಬಿ ಹುದ್ದೆಗಳನ್ನು ಅಧಿಸೂಚಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿದೆ.
ಆದರೆ, ಅಕ್ರಮಗಳಲ್ಲಿ ಭಾಗಿಯಾಗದ ಅಭ್ಯರ್ಥಿಗಳು ಹಾಗೂ ನ್ಯಾಯಾಲಯ ಮತ್ತು ಕೆಎಟಿಯನ್ನು ಸಂಪರ್ಕಿಸಿದ್ದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡುವಂತೆ ಆದೇಶಿಸಿ ಭಾಗಶಃ ಪರಿಹಾರ ಒದಗಿಸಿದೆ.
ಕರ್ನಾಟಕ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಕಾಯಿದೆಯನ್ನು ಎತ್ತಿಹಿಡಿಯುವಂತೆ ಹಾಗೂ ತಮ್ಮ ನೇಮಕಾತಿಗಳನ್ನು ರಕ್ಷಿಸುವಂತೆ ಯಶಸ್ವಿಯಾಗಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಪರ ಹಿರಿಯ ವಕೀಲರಾದ ಸಿ ಎ ಸುಂದರಂ ಮತ್ತು ಆನಂದ್ ಸಂಜಯ್ ಎಂ ನುಲಿ ವಾದಿಸಿದ್ದರು. ಮೇಲ್ಮನವಿದಾರರ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ಹಾಜರಾಗಿದ್ದರು.