ಚಿತ್ರ ನಿರ್ದೇಶಕ, ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿಯವರ ಗಂಗೂಬಾಯಿ ಕಾಠಿಯಾವಾಡಿ ಚಲನಚಿತ್ರ ಬಿಡುಗಡೆಯಾಗದಂತೆ ಕೋರಿ ಹಲವು ಅರ್ಜಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಸಿನಿಮಾದ ಹೆಸರನ್ನು ಬದಲಿಸುವಂತೆ ಸುಪ್ರೀಂಕೋರ್ಟ್ ಬುಧವಾರ ಸಲಹೆ ನೀಡಿದೆ.
ಸಿನಿಮಾ ಶುಕ್ರವಾರ ಬಿಡುಗಡೆಯಾಗಲಿದ್ದು, ನಾಳೆ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ಪೀಠ ವಿಚಾರಣೆ ನಡೆಸಲಿದೆ. ಸಿನಿಮಾದ ನಿರ್ಮಪಕಿ ಹಾಗೂ ಚಿತ್ರದಲ್ಲಿ ಪ್ರಧಾನ ಪಾತ್ರವನ್ನು ಪೋಷಿಸುತ್ತಿರುವ ನಟಿ ಆಲಿಯಾ ಭಟ್ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಈ ಹಿಂದೆ ಮುಂಬೈ ನ್ಯಾಯಾಲಯವೊಂದು ಸಮನ್ಸ್ ನೀಡಿತ್ತು. ಈ ಸಮನ್ಸ್‌ಗೆ ತಡೆ ನೀಡಿದ್ದ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಗಂಗೂಬಾಯಿ ಕಾಠಿಯಾವಾಡಿ ಚಿತ್ರವು ಲೇಖಕರಾದ ಎಸ್ ಹುಸೇನ್ ಜೈದಿ ಮತ್ತು ಜೇನ್ ಬೋರ್ಗೆಸ್ ಅವರ ಕೃತಿ ಆಧಾರಿತವಾಗಿದೆ.
ಆಲಿಯಾ ಅವರ ತಾರಾಗಣದ ʼಗಂಗೂಬಾಯಿ ಕಾಠಿಯಾವಾಡಿʼ ಸೇರಿದಂತೆ ಕಾದಂಬರಿಯನ್ನು ಆಧರಿಸಿ ಯಾವುದೇ ಸಿನಿಮಾ ನಿರ್ಮಾಣ ನಿರ್ದೇಶನ ಅಥವಾ ಪ್ರಸಾರ ಮಾಡದಂತೆ ಬನ್ಸಾಲಿ ಪ್ರೊಡಕ್ಷನ್ಸ್‌ಗೆ ತಡೆ ನೀಡಬೇಕು ಎಂದು ಗಂಗೂಬಾಯಿ ಅವರ ದತ್ತುಪುತ್ರ ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಲಾಗಿತ್ತು.
ಅರ್ಜಿದಾರರನ್ನು ವಕೀಲರಾದ ಅರುಣ್ ಕುಮಾರ್ ಸಿನ್ಹಾ, ರಾಕೇಶ್ ಸಿಂಗ್ ಮತ್ತು ಸುಮಿತ್ ಸಿನ್ಹಾ ಪ್ರತಿನಿಧಿಸಿದ್ದರು. ಬನ್ಸಾಲಿ ಪ್ರೊಡಕ್ಷನ್ಸ್ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ದವೆ ಹಾಗೂ ಕಾನೂನು ಸಂಸ್ಥೆ ಡಿಎಸ್‌ಕೆ ಲೀಗಲ್ ವಾದ ಮಂಡಿಸಿತ್ತು.